ಎಲ್ಲವೂ ನಿರೀಕ್ಷೆಯಂತೆಯೇ...
ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆಲ್ಲುವ ನಿರೀಕ್ಷೆಯನ್ನು ಆ ಪಕ್ಷದ ಅಭಿಮಾನಿಗಳಲ್ಲದ ಇತರ ಹಲವು ಜನವರ್ಗಗಳೂ ನಂಬಿದ್ದವು. ಆದರೆ ಸಂಖ್ಯಾ ಶಾಸ್ತ್ರ, ಜ್ಯೋತಿಷ್ಯ, ರಾಜಕೀಯದ ಅನುಭವ, ಜನಮನ ಹಾಗೂ ಜನರ ನಾಡಿಮಿಡಿತದ ಅರ್ಥವನ್ನು ಇತರರಿಗೆ ಮುನ್ನ ಗ್ರಹಿಸುವವರೂ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಪರಾಭವದ ಪ್ರಮಾಣವನ್ನು ನಿರೀಕ್ಷಿಸಿರಲಿಲ್ಲ.
ಕಾಂಗ್ರೆಸ್ ನಾಯಕರಂತೂ ಇಂತಹ ಸುನಾಮಿಯನ್ನು ನಿರೀಕ್ಷಿಸದೇ ಇದ್ದಿದ್ದರಿಂದ ಈಗ ಅವರೆಲ್ಲರೂ ತಬ್ಬಿಬ್ಬಾಗಿದ್ದಾರೆ. ಇನ್ನೂ ಸೋಲಿನ ಪ್ರಮಾಣ ಹಾಗೂ ಪರಿಣಾಮವನ್ನು ಸರಿಯಾದ ರೀತಿಯಲ್ಲಿ ಅಂದಾಜು ಮಾಡುವುದೂ ಅವರಿಗೆ ಸಾಧ್ಯವಾಗಿಲ್ಲ.
ಐತಿಹಾಸಿಕ, ಪವಾಡ ಸದೃಶ ಸೋಲಿನ ಅನಂತರದ ಮೊದಲ ದಿನ ಸಾಂಪ್ರದಾಯಿಕವಾಗಿ ಜನರ ತೀರ್ಪನ್ನು ಒಪ್ಪುವ ಮಾತಾಡಿದ ಮೇಲೆ ನಿಧಾನವಾಗಿ ಭವಿಷ್ಯದತ್ತ ನಾಯಕರ ಗಮನ ಹರಿಯಲೇಬೇಕು. ಈಗಾಗಲೇ ಸಾಕಷ್ಟು ಪ್ರಚಾರವಾಗಿರುವಂತೆ ಸೋನಿಯಾ ಗಾಂಧಿ- ರಾಹುಲ ಗಾಂಧಿ ಅವರು ತಮ್ಮ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಕ್ಕೆ ರಾಜಿನಾಮೆಯನ್ನು ಪ್ರಕಟಿಸುವುದಕ್ಕೆ ಮುಂಚೆಯೇ, ಪಕ್ಷದ ಇಡೀ ಕಾರ್ಯಕಾರಿ ಸಮಿತಿಯೇ ರಾಜಿನಾಮೆ ನೀಡುವ ಸಾಮೂಹಿಕ ನಿರ್ಧಾರ ಕುರಿತ ವರದಿಗಳು ಪ್ರಕಟವಾಗಿದ್ದು, ಪಕ್ಷದ ಈಗಿನ ಗೊಂದಲದ ಸ್ಥಿತಿಯಲ್ಲಿ ಸಹಜವಾದದ್ದೇ.
ಎಲ್ಲರೂ ರಾಜಿನಾಮೆ ಕೊಟ್ಟರೆ, ಪಕ್ಷದ ಕಾರ್ಯಾಲಯಕ್ಕಂತೂ ಬೀಗಮುದ್ರೆ ಬೀಳುವುದು ಅಸಾಧ್ಯ. ಪಕ್ಷವನ್ನು ಅಧಿಕೃತವಾಗಿ ವಿಸರ್ಜಿಸಿ, ತನ್ನ ಸದಸ್ಯರಿಗೆ ಅವರಿಗೆ ಇಷ್ಟ ಬಂದ ಪಕ್ಷವನ್ನು ಸೇರುವ ಸ್ವಾತಂತ್ರ್ಯವನ್ನು ಕೊಡುವಂತಹ ನಿರ್ಧಾರ ಕಾಂಗ್ರೆಸ್ಸಿನಂತಹ ಪಕ್ಷಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ಸಿನಲ್ಲಿ ಈಗ ಮನೆ ಮಾಡಿರುವ ವಂಶಪಾರಂಪರ್ಯ ನಾಯಕತ್ವವನ್ನು ಈ ಹಂತದಲ್ಲಿ ತಿರಸ್ಕರಿಸುವುದೂ ಅಸಾಧ್ಯ. ಅದಕ್ಕೆ ಪಕ್ಷವನ್ನು ಸಿದ್ಧಗೊಳಿಸಲು ಈಗಿನ ವ್ಯವಸ್ಥೆಯಲ್ಲಿ ಭಗೀರಥ ಪ್ರಯತ್ನದಿಂದಲೂ ಸಾಧ್ಯವಾಗಲಿಕ್ಕಿಲ್ಲ. ಒಂದು ವೇಳೆ ಸಾಧ್ಯವಾದರೂ ಅದಕ್ಕೆ ವಿಪರೀತ ಸಮಯ ಬೇಕು.
ಅಂದರೆ, ಹೀಗೇ ಕಾಂಗ್ರೆಸ್ ನಡೆದುಕೊಂಡು ಹೋಗಬೇಕೆನ್ನುವ "ನೀಲನಕ್ಷೆ" ಸದ್ಯಕ್ಕೆ ಯಾರ ಬಳಿಯಲ್ಲೂ ಇಲ್ಲ. ಈಗಾಗಲೇ ಪ್ರಸ್ತಾಪಿಸಿರುವಂತೆ, ಪಕ್ಷದಲ್ಲಿನ ಪ್ರಾತಿನಿಧಿಕ ಸಮಿತಿಗಳಿಗೆ ನಿಜವಾದ ಅರ್ಥದಲ್ಲಿ ಅವುಗಳ ಅಧಿಕಾರ ಹಾಗೂ ಮರ್ಯಾದೆಯನ್ನು ಹಿಂತಿರುಗಿಸುವ ಚಿಂತನೆ ನಡೆಯಬೇಕು.
ತುರ್ತು ಪರಿಸ್ಥಿತಿಯ ಅನಂತರದ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಧೂಳೀಪಟವಾದಾಗ, ಶರದ್ ಪವಾರ್ ಅವರು ಪಕ್ಷವನ್ನು ಹಳ್ಳಿಗಳಲ್ಲಿನ ಬೇರು ಮಟ್ಟದಿಂದ ಮತ್ತೆ ಕಟ್ಟಲು ಐದು ವರ್ಷ ಬೇಕು ಎಂದಿದ್ದರು. ಆ ಐದು ವರ್ಷದಲ್ಲೇ ವಂಶಪಾರಂಪರ್ಯ ರಾಜಕೀಯ ಇನ್ನಷ್ಟು ಬಲವಾಗಿದ್ದು.
ಈಗಲೂ ನಿರೀಕ್ಷೆಯಂತೆಯೇ, ಬಗೆಬಗೆಯ ಚಿಂತನೆಗಳ ಪ್ರಕಟಣೆಯ ಅನಂತರ, ಬಹುತೇಕ ರಾಜಕೀಯ ಪಂಡಿತರ ಅನಿಸಿಕೆಯಂತೆ ಕಾಂಗ್ರೆಸ್ಸಿನಲ್ಲಿ ಮೂಲಭೂತವಾಗಿ ಯಾವ ಬದಲಾವಣೆಯೂ ಆಗುವುದಿಲ್ಲ. ಹೀಗೇ ರಾಜಿನಾಮೆ, ಸಾಮೂಹಿಕ ರಾಜಿನಾಮೆಯ ಮಾತುಗಳ ಮಧ್ಯೆಯೇ, ಅದೇ ನಾಯಕತ್ವ ಮುಂದುವರಿಯುತ್ತದೆ. ಅಬ್ಬಬ್ಬಾ ಎಂದರೆ, ಕೆಲವು ರಾಜ್ಯಗಳಲ್ಲಿ ಹಲವು ತಲೆಗಳು ಉರುಳಬಹುದು. ಈಗ ವರಿಷ್ಠರೇ ಗೊಂದಲದಲ್ಲಿರುವಾಗ ಸಾಮಾನ್ಯ ಕಾಂಗ್ರೆಸ್ಸಿಗರಿಗೆ ದಾರಿ ತೋರಿಸುವವರು ಎಲ್ಲಿಂದಲೋ ಇಳಿದು ಬರುವುದಿಲ್ಲ. ರಾಜಕೀಯವೂ ಈಗಿನಂತೆಯೇ ಮುಂದುವರಿದುಕೊಂಡು ಹೋಗುತ್ತದೆ.