ಅಮೆರಿಕದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್ ತನ್ನ ಸೂಕ್ಷ್ಮಮತಿಯಿಂದ, ಉತ್ತಮ ಆಡಳಿತದಿಂದ ಹಾಗೂ ಮಾನವೀಯ ಗುಣಗಳಿಂದ ಹೆಸರುವಾಸಿಯಾಗಿದ್ದ. ತಾನು ಸ್ಪರ್ಧಿಸಿದ್ದ ಎಲ್ಲ ಚುನಾವಣೆಗಳಲ್ಲಿ ಸೋಲನ್ನನುಭವಿಸಿ, ಕೊನೆಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದ. ಅಧ್ಯಕ್ಷನಾಗಿ ಆಯ್ಕೆಯಾಗುವ ಮೊದಲು ಆತ ವಕೀಲಿ ವೃತ್ತಿಯನ್ನು ಅವಲಂಬಿಸಿದ್ದ. ಎಷ್ಟೋ ವೇಳೆ ನ್ಯಾಯ ಸಮ್ಮತವಲ್ಲವೆಂದು ತೋರುವ ಮೊಕದ್ದಮೆಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ವೃಥಾ ನ್ಯಾಯಾಲಯಕ್ಕೆ ತಿರುಗಿ ಸಮಯ ವ್ಯಯಮಾಡುವುದಕ್ಕಿಂತ ರಾಜಿ ಮಾಡಿಕೊಳ್ಳುವುದರಿಂದ ಹೆಚ್ಚು ಲಾಭ ಎಂಬುದನ್ನು ಅರಿತು ತನ್ನ ಕಕ್ಷಿದಾರರಿಗೆ ಮನವರಿಕೆ ಮಾಡಿಕೊಟ್ಟು ನ್ಯಾಯ ಒದಗಿಸಿಕೊಟ್ಟದ್ದೂ ಉಂಟು. ವಕೀಲನಾಗಿದ್ದ ಸಮಯದಲ್ಲಿ ಒಮ್ಮೆ ಲಿಂಕನ್ ತನ್ನ ಕಚೇರಿಯಲ್ಲಿ ಕುಳಿತು ಯಾವುದೋ ಗಹನವಾದ ಮೊಕದ್ದಮೆ ಕುರಿತು ಅಧ್ಯಯನ ಮಾಡುವಾಗ ಒಬ್ಬ ಶ್ರೀಮಂತ ವ್ಯಕ್ತಿ ಕಚೇರಿಯ ಒಳಗೆ ಬಂದು ಲಿಂಕನ್ನನಿಗೆ ನಮಸ್ಕರಿಸಿ ಆತನ ಮುಂದಿನ ಕುರ್ಚಿಯಲ್ಲಿ ಕುಳಿತುಕೊಂಡ. ಬಂದ ಕೆಲಸವೇನೆಂದು ಕೇಳಿದಾಗ ತಿಳಿದು ಬಂದಿದ್ದು ಇಷ್ಟು: ಆತ ಒಬ್ಬ ರೈತನಿಗೆ ಸಾಲ ನೀಡಿದ್ದ. ಆದರೆ ಆ ರೈತ ಎಷ್ಟು ದಿನವಾದರೂ ಪಡೆದ ಸಾಲವನ್ನು ಹಿಂದಿರುಗಿಸದೇ ಇದ್ದುದರಿಂದ ಅನಿವಾರ್ಯವಾಗಿ ನ್ಯಾಯಾಲಯದ ಮೊರೆಹೋಗಲು ವಕೀಲರ ಬಳಿ ಬಂದಿದ್ದ. ಮೊಕದ್ದಮೆ ಹೂಡಿ ಹಣ ವಸೂಲು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ. ಅದು ನ್ಯಾಯಸಮ್ಮತವೆಂದು ಲಿಂಕನ್ನನಿಗೆ ಅನಿಸಿತು. ಸಾಲ ಪಡೆದ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತನ ದಾರುಣ ಪರಿಸ್ಥಿತಿಯ ಬಗ್ಗೆ ತಿಳಿಯಿತು. ಸಾಲ ಪಡೆದ ರೈತ ಬಡವನಷ್ಟೇ ಅಲ್ಲ, ಪ್ರಾಮಾಣಿಕ ಕೂಡ. ಅವನಿಗೆ ಪಡೆದ ಸಾಲವನ್ನು ಹಿಂದಿರುಗಿಸುವ ಮನಸ್ಸಿದ್ದರೂ ಸಹ, ತನ್ನ ಅಲ್ಪ ದುಡಿಮೆಯಲ್ಲಿ ಸಾಲ ತೀರಿಸಲಾಗದೇ ಪರದಾಡುತ್ತಿದ್ದ.
ತಾನು ತಗೆದುಕೊಳ್ಳುವ ಆ ಮೊಕದ್ದಮೆಯಲ್ಲಿ ಶ್ರೀಮಂತನ ಪರ ನ್ಯಾಯ ಸಿಗುವ ಸಂಭವವಿತ್ತು. ಆದರೆ ರೈತ ಸೋತರೆ ಆತನ ಹೆಂಡತಿ-ಮಕ್ಕಳು ಬೀದಿಯಲ್ಲಿ ಬೀಳುವುದು ನಿಶ್ಚಿತವಾಗಿತ್ತು. ಆದ್ದರಿಂದ ಲಿಂಕನ್ ಫಿರ್ಯಾದುದಾರನಾದ ಆ ಶ್ರೀಮಂತನನ್ನು ಕರೆಸಿ, "ಸಾಲದ ಹಣ ವಸೂಲಾದ ತಕ್ಷಣ ನೀವು ಶ್ರೀಮಂತರಾಗುವುದಿಲ್ಲ. ಆದರೆ ಆ ಬಡ ವ್ಯಕ್ತಿಯ ಬಾಳು ಹಾಳಾಗುತ್ತದೆ. ದೊಡ್ಡ ಮನಸ್ಸು ಮಾಡಿ, ಬಡ ರೈತನ ವಿರುದ್ಧ ಮೊಕದ್ದಮೆ ಹೂಡುವುದು ಬೇಡ" ಎಂದು ಸಲಹೆ ನೀಡಿದ. ಅಲ್ಲದೆ ಹಾಗೆ ಮಾಡುವುದರಿಂದ ಒಂದು ಕುಟುಂಬ ನಾಶವಾಗುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಹೇಳಿದ. ಲಿಂಕನ್‌ನ ಮಾನವೀಯ ಗುಣಕ್ಕೆ ಮಾರುಹೋದ ಶ್ರೀಮಂತ ತಾನು ಹೂಡಿದ್ದ ಮೊಕದ್ದಮೆಯನ್ನು ವಾಪಸ್ಸು ಪಡೆದ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com