ಸಾಧನೆಯ ಹೆಮ್ಮೆ
ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ತನ್ನ ಮೊದಲ ವರ್ಷದ ಸಾಧನೆಯ ವರದಿಯನ್ನು ಜನರಿಗೆ ನೀಡಿದೆ. ಆ ವರದಿಯಲ್ಲಿ ಜನರ ಕಣ್ಣಿಗೆ ರಾಚುವಂತೆ ಕಾಣಿಸುವುದು ಅನ್ನಭಾಗ್ಯ, ಕ್ಷೀರಭಾಗ್ಯ ಸಾಲಮನ್ನಾ, ಬಡ್ಡಿ ರಹಿತ ಸಾಲ ನೀಡಿಕೆ, ಮಹಿಳೆಯರಿಗೆ ವಿಶೇಷವಾದ ನೆರವಿನ ಪ್ರಸ್ತಾಪವಾಗಿದೆ. ನಿಜ. ಎಲ್ಲರನ್ನೂ ಒಳಗೊಂಡು ಮುನ್ನಡೆ ಸಾಧಿಸಬೇಕಾದ ಜನತಂತ್ರ ವ್ಯವಸ್ಥೆಯ ಕಲ್ಯಾಣ ರಾಜ್ಯದ ಕಲ್ಪನೆಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸಾಕಷ್ಟು ಮಹತ್ವವಿದೆ. ಆ ದಿಕ್ಕಿನಲ್ಲಿ ಸಿದ್ದರಾಮಯ್ಯ ಹಾಗೂ ಅವರ ಸಂಗಾತಿಗಳ "ನಿಷ್ಠೆ" ಮೆಚ್ಚುವಂತಹದ್ದೇ. ಆದರೆ ಈ ಕೊಡುಗೆ-ಉಡುಗೊರೆಗಳು ತಮ್ಮ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುತ್ತಿವೆಯೇ? ಆ ಪ್ರಶ್ನೆಗೆ ಈಗ ಅನೇಕರು ಯೋಜನೆಗಳ ಉದ್ದೇಶವನ್ನೇ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರ ನುಂಗಿ ಹಾಕಿದೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರೇನೋ ತಮ್ಮ ವರದಿಯಲ್ಲಿ ಯಾವ್ಯಾವ ಯೋಜನೆಗಳಿಂದ ಎಷ್ಟೆಷ್ಟು ಜನರಿಗೆ ಫಲ ಸಿಕ್ಕಿತು ಎನ್ನುವ ಅಂಕಿ-ಅಂಶಗಳಲ್ಲಿ ವಿವರಿಸಿದ್ದಾರೆ. ಆದರೆ ಆ ಅಂಕಿ-ಅಂಶಗಳಲ್ಲಿ ಜನರ ವಿಶ್ವಾಸ ಇದ್ದಂತಿಲ್ಲ. ಅರ್ಹರಿಗೆ ಸರ್ಕಾರ ನೀಡಿರುವ ಎಲ್ಲ ಭಾಗ್ಯಗಳೂ ಅಗತ್ಯವೇ. ಆದರೆ ಅದು ಬಡವರಿಗೇ ತಲುಪುವ ಖಾತ್ರಿ ಸಿಗುವುದು ಉತ್ತಮ ಗುಣಮಟ್ಟದ ಆಡಳಿತ ವ್ಯವಸ್ಥೆಯನ್ನು ರೂಪಿಸಿದಾಗಲೇ. ಆ ದಿಕ್ಕಿನಲ್ಲಿ ಸಿದ್ದರಾಮಯ್ಯ ಈಗ ಮುಂದಿನ ಹೆಜ್ಜೆ ಇಡಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.