ತಪ್ಪಾಯ್ತು ತಿದ್ಕೋತೀವಿ
ಓದುಗರು ಎಷ್ಟು ಸೂಕ್ಷ್ಮವಾಗಿರುತ್ತಾರೆ ಎಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಒಂದೇ ರೀತಿಯ ಪದಗಳು ಎಷ್ಟು ಬಾರಿ ಬಳಕೆಯಾಗಿವೆ ಎಂಬುದನ್ನು ಅವರು ಪ್ರಸ್ತಾಪಿಸಿದ್ದಾರೆ. ತುಮಕೂರಿನಿಂದ ರಮೇಶ ಎನ್.ಎ. ಅವರು ಬರೆಯುತ್ತಾರೆ- 'ಮೇ 22ರಂದು ಪತ್ರಿಕೆಯ ಪುಟ 5ರಲ್ಲಿ 'ಎಳೆ ಮಕ್ಕಳಿಗೆ ದೌರ್ಜನ್ಯದ ಲೈಂಗಿಕತೆ' ಎಂಬ ವರದಿಯಲ್ಲಿ ಒಂದನೇ ತರಗತಿ ಮಕ್ಕಳಿಗೆ ಮತ್ತು ಕರಪತ್ರ ನೀಡಲಾಗಿದೆ ಎಂಬ ಈ ಎರಡು ಅಂಶಗಳು...'
'1ನೇ ಪ್ಯಾರಾದಲ್ಲಿ (1 ಸಾರಿ), 2ನೇ ಪ್ಯಾರಾದಲ್ಲಿ (1ಸಾರಿ), 3ನೇ ಪ್ಯಾರಾದಲ್ಲಿ (1 ಸಾರಿ), 4ನೇ ಪ್ಯಾರಾದಲ್ಲಿ 2 ಸಾರಿ', 7ನೇ ಪ್ಯಾರಾದಲ್ಲಿ (2 ಸಾರಿ), 8ನೇ ಪ್ಯಾರಾದಲ್ಲಿ (2 ಸಾರಿ), 9ನೇ ಪ್ಯಾರಾದಲ್ಲಿ (1 ಸಾರಿ), 10ನೇ ಪ್ಯಾರಾದಲ್ಲಿ (1 ಸಾರಿ) ಬಳಕೆಯಾಗಿದೆ' ಎಂದಿದ್ದಾರೆ.
ಶಿಕಾರಿಪುರದಿಂದ ಆರ್.ಸಿ. ಪರಶುರಾಮ ಅವರು ಬರೆಯುತ್ತಾರೆ- 'ಮೇ 23ರ 'ಕನ್ನಡಪ್ರಭ'ದ ಪುಟ 5ರಲ್ಲಿ 'ಮೋದಿ ನಿರೀಕ್ಷೆಯಲ್ಲಿ ಅಂಜನಾದ್ರಿ' ಎಂಬ ಸುದ್ದಿಯಲ್ಲಿ ಅಂಜನಾದ್ರಿ ಬೆಟ್ಟದ ಅರ್ಚಕರಾದ ವಿದ್ಯಾದಾಸ್ ಅವರ ಹೇಳಿಕೆಯಲ್ಲಿ, 'ಅಂಜನಾದ್ರಿಗೆ ಈಗ ನಿಯೋಜಿತ ಪ್ರಧಾನಿ ಜಶೋಧಾಬೆನ್ ಬಂದು ಶಕ್ತಿ ಪೂಜೆ ಮಾಡಿಹೋಗಿದ್ದಾರೆ' ಎಂದಿದೆ.' 'ಆದರೆ ನಮ್ಮ ನಿಯೋಜಿತ ಪ್ರಧಾನಿ ನರೇಂದ್ರ ಮೋದಿಯವರಲ್ಲವೇ? ಅವರ ಪತ್ನಿಯವರು ನಿಯೋಜಿತ ಪ್ರಧಾನಿ ಹೇಗಾಗುತ್ತಾರೆ? ಹೀಗಾಗಿ ಇದರಲ್ಲಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಎಂದಾಗಬೇಕಿತ್ತು. ಇದೇ ಸುದ್ದಿಯಲ್ಲಿ ಪ್ರಧಾನಿ ಆಗಮನದ ನಿರೀಕ್ಷೆಯಲ್ಲಿ 'ಅರ್ಜಕರಿಂದ' ಸಿದ್ಧತೆ ಎಂದಿದೆ. ಅರ್ಚಕರಿಂದ ಎಂದಾಗಬೇಕಿತ್ತು' ಎಂದಿದ್ದಾರೆ.
ತುಮಕೂರಿನಿಂದ ಕರೂಡಿ ರಾಘವೇಂದ್ರ ಅವರು ಬರೆಯುತ್ತಾರೆ- 'ಮೇ 24ರಂದು ಶನಿವಾರ ತುಮಕೂರು ಜಿಲ್ಲೆ ವರದಿ ಪ್ರಕಟಿಸುವಾಗ ಪುಟ 3ರಲ್ಲಿ 'ಬೋರ್‌ವೆಲ್‌ಗಾಗಿ 6 ಕೋಟಿ ಪ್ರಸ್ಥಾವನೆ' ಸುದ್ದಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬರಪೀಡಿತ ಹಳ್ಳಿಗಳ ಸಂಖ್ಯೆ ನೀಡಿದ್ದು, ಮುಖ್ಯಕಾಲಂನಲ್ಲಿ ಜಿಲ್ಲಾವಾರು ಎಂದು ತೋರಿಸಿದ್ದೀರಿ.'
'ಆದರೆ ಈ ವಿವರ ತಾಲೂಕುವಾರು ಎಂದಿರಬೇಕಿತ್ತು. ಏಕೆಂದರೆ ಕೇವಲ ತುಮಕೂರು ಜಿಲ್ಲೆಯ ತಾಲೂಕುಗಳ ಹೆಸರುಗಳು ಮಾತ್ರವೇ ಇದೆ. ಜಿಲ್ಲಾವಾರು ಎಂದರೆ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳ ಹೆಸರುಗಳನ್ನು ಮತ್ತು ಅಂಕಿ-ಅಂಶಗಳನ್ನು ನೀಡಬೇಕಿತ್ತು' ಎಂದಿದ್ದಾರೆ.
ಹರಪನಹಳ್ಳಿಯಿಂದ ಕೆ. ಶ್ರೀನಿವಾಸರಾವ್ ಅವರು ಬರೆಯುತ್ತಾರೆ- 'ಮೇ 22ರ ಪತ್ರಿಕೆಯ ಪುಟ 5ರ ವರದಿಯಲ್ಲಿ ಭಾವಚಿತ್ರದ ಕೆಳಗೆ 'ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿನೀಡಿ ಶ್ರೀಗಳ ಆಶೀರ್ವಾದ ಪಡೆದರು' ಎಂದು ಪ್ರಕಟಿಸಲಾಗಿದೆ. ಆದರೆ ಚಿತ್ರದಲ್ಲಿ ಪರಮೇಶ್ವರ್ ಬದಲಾಗಿ ಸ್ಥಳೀಯ ಶಾಸಕ ಮುದ್ದ ಹನುಮೇಗೌಡರು ಆಶೀರ್ವಾದ ಪಡೆಯುತ್ತಿದ್ದಾರೆ!'
'ಇದೇ ಸಂಚಿಕೆಯ 'ಬೈಟು ಕಾಫಿ'ಯ 'ಟೂರುಕೇರಿ' ವಿಭಾಗದಲ್ಲಿನ ಲೇಖನದಲ್ಲಿ 'ಭದ್ರೆಯ ಬಿನ್ನಾಣ' ಹಲವೆಡೆ 'ಭಿನ್ನಾಣ'ವಾಗಿದೆ. ಮುಂದೆ ಸರಿದಾಗ 'ಜೀವನೋತ್ಸಾಹ' ಇಲ್ಲಿ 'ಜೀವನುತ್ಸಾಹ'ವಾಗಿಬಿಟ್ಟಿದೆ' ಎಂದಿದ್ದಾರೆ.
-ವಿಶ್ವೇಶ್ವರಭಟ್