ನೆಂಟರಿಷ್ಟರನ್ನು ದೂರವಿಡಿ
ಹಳೆಯ ಮೈಸೂರಿನ ದಿವಾನರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಾಯ ಅವರ ಕಾರ್ಯಶೈಲಿ ಹಾಗೂ ಚಿಂತನೆಯ ಧಾಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟರಮಟ್ಟಿಗೆ ತಿಳಿದುಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ಈಗ ಅವರು ಮಂತ್ರಿಗಳಿಗೆ ನೀಡಿರುವ ನೆಂಟರನ್ನು ದೂರವಿಡಿ ಎನ್ನುವ ಆದೇಶ ಅಥವಾ ಸಲಹೆಯನ್ನೇ ವಿಶ್ವೇಶ್ವರಾಯ ಅವರೂ ನೀಡಿದ್ದರು ಎನ್ನುವುದು ನಿಜ. ಇದು ಲಾಗಾಯ್ತಿನಿಂದಲೂ ಬಂದಿರುವ ಸಲಹೆ.
ದಿವಾನರಾದ ಕೂಡಲೇ, ವಿಶ್ವೇಶ್ವರಾಯ ಅವರು ತಮ್ಮ ಬಂಧುಗಳನ್ನೆಲ್ಲ ಊಟಕ್ಕೆ ಕರೆದು ದಯಮಾಡಿ ನನ್ನ ಕಾರ್ಯಾಲಯದಿಂದ ದೂರವಿರಿ ಎಂದು ಕೇಳಿಕೊಂಡಿದ್ದರಂತೆ, ಇದು ದಂತಕತೆಯೇ ಇರಬಹುದು. ಆದರೆ ಆ ಮಾತಿನಲ್ಲಿ ಅಡಕವಾಗಿರುವ ತತ್ವ ನಿಜಕ್ಕೂ ಒಳ್ಳೆಯದು.
ಹಿಂದೆ ರಾಜ್ಯದಲ್ಲಿ ಹೆಚ್ಚು ಕಡಿಮೆ ಅಧಿಕಾರ ವಹಿಸಿಕೊಂಡ ಕೂಡಲೇ ಎಲ್ಲ ಮುಖ್ಯಮಂತ್ರಿಗಳೂ ಒಂದು ಸಂಪ್ರದಾಯ ಎನ್ನುವಂತೆ, ಮಂತ್ರಿಗಳಿಗೆ ನಿಮ್ಮ ಆಪ್ತ ಸಹಾಯಕರಾಗಿ ನಿಮ್ಮ ನೆಂಟರು ಅಥವಾ ಜಾತಿಯವರನ್ನು ನೇಮಿಸಿಕೊಳ್ಳಬೇಡಿ ಎನ್ನುವ ಸಂದೇಶವನ್ನು ರವಾನಿಸುತ್ತಿದ್ದರು. ಆದರೆ ಇಂತಹ ಅನೇಕ ಸೂಚನೆಗಳಂತೆ, ಮಂತ್ರಿಗಳಾದವರು ಯಾರೂ ಈ ಸೂಚನೆಗೆ ಹೆಚ್ಚು ಮೌಲ್ಯವನ್ನು ನೀಡುತ್ತಿರಲಿಲ್ಲ ಎನ್ನುವುದೂ ನಿಜ.
ನೆಂಟರಿಷ್ಟರನ್ನು, ಕುಲಬಾಂಧವರನ್ನು ಅಧಿಕಾರಸ್ಥ ರಾಜಕಾರಣಿಗಳು ತಮ್ಮ ಸಿಬ್ಬಂದಿ ವರ್ಗದಲ್ಲಿ ಸೇರಿಸಿಕೊಳ್ಳುವುದು ಸರಿಯಲ್ಲ ಎನ್ನುವ ಮಾತಿನ ಹಿಂದೆ, ಜನತಂತ್ರ ವ್ಯವಸ್ಥೆಗೇ ಮಾರಕವಾದ ಸ್ವಜನಪಕ್ಷಪಾತದ ಆರೋಪದಿಂದ ರಾಜ್ಯಾಧಿಕಾರದ ದಂಡವನ್ನು ಹಿಡಿದವರು ದೂರವಿರಬೇಕು ಎನ್ನುವ ಆಶಯವಿದೆ.
ಆದರೆ ಇದುವರೆಗಿನ ಅನುಭವದಿಂದ ಹೇಳಬೇಕಾದರೆ, ಹೆಚ್ಚು ಕಡಿಮೆ ಎಲ್ಲ ಮಂತ್ರಿಗಳ ಕಾರ್ಯಾಲಯಗಳಲ್ಲೂ ಅನೇಕ ನೌಕರರು ಕೆಲಸ ಮಾಡುತ್ತಿದ್ದರೂ, ಅಲ್ಲಿ ಪ್ರಧಾನವಾಗಿ ಒಬ್ಬರು ಅಥವಾ ಇಬ್ಬರು ಮಂತ್ರಿಗಳ ನಮನ ಸಚಿವರಂತೆಯೇ ಇರುತ್ತಾರೆ. ಸಾಮಾನ್ಯವಾಗಿ ಆ ವ್ಯಕ್ತಿಗಳು ಮಂತ್ರಿಯ ಜಾತಿಗೆ ಸೇರಿದವರು ಅಥವಾ ನೆಂಟರೇ ಆಗಿರುತ್ತಾರೆ. ಇದಕ್ಕೆ ಆ ಮಂತ್ರಿಗಳಲ್ಲಿ ಕೆಲವರು ಕೊಡುವ ವಿವರಣೆಯೂ ಸ್ವಾರಸ್ಯವಾದದ್ದೇ. ಆಪ್ತ ಸಿಬ್ಬಂದಿಯಲ್ಲಿರುವವರು ಅನೇಕ ಬಾರಿ ಮಂತ್ರಿಗಳ ಮನೆಯಲ್ಲೂ ಕೆಲಸ ಮಾಡಬೇಕಾಗಬಹುದು. ಆಗ ಅವರು ಮನೆಯಲ್ಲೆಲ್ಲಾ ಓಡಾಡಬೇಕಾಗಿ ಬರಬಹುದು. ಆದ್ದರಿಂದ "ಸಣ್ಣ ಪುಟ್ಟ ಸ್ಥಾನಗಳಿಗೆ" ಮಂತ್ರಿಗಳ ಜಾತಿಗೆ ಸೇರಿದವರನ್ನೇ ನೇಮಿಸಿಕೊಳ್ಳುವುದು ಸೂಕ್ತವೆಂದು ಅನೇಕರಿಗೆ ಕಂಡುಬಂದಿರಬಹುದು.
ಇನ್ನು ಕೆಲವರು, ಮಂತ್ರಿಗಳ ಕಾರ್ಯಾಲಯ ಎಂದರೆ, ಹಲವು ರಹಸ್ಯಗಳ ಬೀಡು. ಮಂತ್ರಿಗಳ ಆಪ್ತ ಸಿಬ್ಬಂದಿಯಲ್ಲಿ ಕೆಲವರಿಗಾದರೂ ಆ ರಹಸ್ಯಗಳು ಸೂಕ್ಷ್ಮವಾಗಿ ಗೊತ್ತಿರಬೇಕಾಗುತ್ತದೆ. ನಮ್ಮ ಸಮಾಜದಲ್ಲಿ ವಿಶ್ವಾಸಕ್ಕೆ ಅರ್ಹರಾದ ವ್ಯಕ್ತಿಗಳನ್ನು ಹುಡುಕುವಾಗ ಜಾತಿ ಅಥವಾ ನೆಂಟಸ್ತಿಕೆಯನ್ನು ಕಡೆಗಾಣಿಸುವುದು ಕಷ್ಟ ಎನ್ನುತ್ತಾರೆ.
ಇಂತಹ ನೆಪಗಳನ್ನು ಬೇಕಾದಷ್ಟು ಹುಡುಕಬಹುದು. ಮಂತ್ರಿಗಳ ಜಾತಿಯವರೇ ಆದ ಆಪ್ತ ಸಿಬ್ಬಂದಿಯ ಜನರಿಗೆ ಮಂತ್ರಿಗಳ ಆಪ್ತರು ಯಾರು, ಯಾರು ಆಪ್ತರಲ್ಲ ಎನ್ನುವುದು ತಿಳಿದಿರಬೇಕು. ಇಲ್ಲಿ ಜಾತಿಯ ಪಾತ್ರ ದೊಡ್ಡದು. ಪ್ರಧಾನಿ ನರೇಂದ್ರ ಮೋದಿ ಅವರು ಮಂತ್ರಿಗಳಿಗೆ ನೀಡಿರುವ ಸೂಚನೆ - ಸಲಹೆ ಒಳ್ಳೆಯದೇ. ಆದರೆ ಆ ಸಲಹೆಯನ್ನು ಕಡ್ಡಾಯವಾಗಿ ಆದೇಶದ ಮೂಲಕ ಜಾರಿಗೆ ತರುವುದು ಸಾಧ್ಯವಿಲ್ಲ. ಜಾತ್ಯತೀತ ಚಿಂತನೆ ನಾಯಕರಲ್ಲಿ ತಾನೇ ತಾನಾಗಿ ಹೊರಹೊಮ್ಮಬೇಕು.