ತಪ್ಪಾಯ್ತು ತಿದ್ಕೋತೀವಿ
ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಮೇ 10ರಂದು ಮುಖಪುಟ ಲೇಖನ 'ವಾರಾಣಸಿ ಕ್ಷೇತ್ರದ ಕುತೂಹಲ ಬಿಚ್ಚಿಟ್ಟ ಇಂಡಿಯಾ ಟುಡೆ ಸಮೀಕ್ಷೆಯ 'ಗೆಲ್ಲೋದು ಮೋದಿನೇ' ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯಲ್ಲಿ ಈ ರೀತಿ ಇದೆ. ಸಂಭವನೀಯ ಮತ ವಾರಾಣಸಿ ಶೇ.56, ಶೇ.10, ಶೇ.7 ಮತ್ತು ಶೇ.3 100 ಸರಿ ಇದೆ.'
'ಧರ್ಮಾಧಾರಿತ ಶೇಕಡಾವಾರು 4017221155 100 ಸರಿ ಇದೆ. ಆದರೆ ಪ್ರಧಾನಿ ಯಾರಾಗಬೇಕು ಎಂಬ ಸಮೀಕ್ಷೆ ಹೀಗಿದೆ. ಮೋದಿ ಶೇ.57, ಮಾಯಾವತಿ ಶೇ.7, ಮುಲಾಯಂ ಶೇ.9, ಕೇಜ್ರಿವಾಲ್ ಶೇ.10, ರಾಹುಲ್ ಶೇ.12, ಇತರೆ ಶೇ.3 ಎಲ್ಲಾ ಸೇರಿ 98 ಆಯಿತು. ಶೇ.2 ಏನಾಯಿತು ಎಂಬುದು ತಿಳಿಯುತ್ತಿಲ್ಲ' ಎಂದಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದಿಂದ ಚಂದ್ರಶೇಖರ ಅವರು ಬರೆಯುತ್ತಾರೆ- 'ವಾಸುಕಿಯವರ 'ಪದಯಾತ್ರೆ'ಯ ಹೊಸ ಶೋಧಗಳು 'ಪದರಂಗ' ಅಥವಾ 'ಪದಬಂಧ' ಅಥವಾ 'ಪದಯಾತ್ರೆ' ಇರುವುದು ಓದುಗರ ಅರಿವಿಗೆ ಕಸರತ್ತು ಕೊಟ್ಟು, ಅವರನ್ನು ಸರಿಯಾದ ವ್ಯಾಕರಣ ಬದ್ಧ, ಶುದ್ಧ ಭಾಷೆಯ ಜ್ಞಾನವನ್ನು ಹೆಚ್ಚಿಸಲು. ಕೃತಿಕಾರನ ವಿಚಿತ್ರ, ವಿಕೃತ, ಪಾಂಡಿತ್ಯವನ್ನು ಪ್ರದರ್ಶಿಸಲು ಅಲ್ಲ ಎಂದು ಕೊಂಡಿದ್ದೇನೆ.'
'ರೂಢಿಯಲ್ಲಿ ಇಲ್ಲದಿರುವ, ಸಾಮಾನ್ಯ ನಿಘಂಟು/ಕೋಶಗಳಲ್ಲಿರದ ಪದಗಳನ್ನು ಜೋಡಿಸಿ 'ಬಂಧ' ಮಾಡಲು ಅಲ್ಲ. ಅಂಥವು ಬಹುಶಃ ಕನ್ನಡ ಭಾಷೆಯಲ್ಲಿ ಪದಕೋಶದ ಸಂಶೋಧನೆ ಮಾಡುವುದು, ಡಾಕ್ಟರೇಟ್ ಮಾಡುವವರಿಗೆ ಉಪಕಾರಿ ಆಗುವುದೇನೋ ಗೊತ್ತಿಲ್ಲ. ಕೆಲವು ಅಲ್ಲೂ ಬಾಲಿಶ ಅನ್ನಿಸುತ್ತದೆ. ಉದಾಹರಣೆಗೆ ಪದಬಂಧ 440ರಲ್ಲಿ ಎಡದಿಂದ ಬಲಕ್ಕೆ-1ರಲ್ಲಿ ಕಬ್ಬಿಣದ ಕೆಲಸ ಮಾಡುವವನು 'ಕುಂಬಾರನಾಗುತ್ತಾನೆ', 10ರಲ್ಲಿ ಮನುಷ್ಯ ಮತ್ತು ಸಿಂಹ 'ನರಹರಿ'ಯಾಗುತ್ತಾನೆ!'
'ಪದಬಂಧ 442ರಲ್ಲಿ ಎಡದಿಂದ ಬಲಕ್ಕೆ 4ರಲ್ಲಿ 'ಗುಜರಿ'ಗೆ 'ಮೋಡ್ಕಾ'? ಮೇಲಿಂದ ಕೆಳಕ್ಕೆ 15ರ ನಂತರ ಯಾವ ಸುಳಿವೂ ಇಲ್ಲದ ಬಂಧ.'
'ಪದಯಾತ್ರೆ 443ರಲ್ಲಿ ಎಡದಿಂದ ಬಲಕ್ಕೆ 1ರಲ್ಲಿ ಮಹಿಳೆಯರು ಮುಖಕ್ಕೆ ಹಾಕುವ 'ಅವಕುಂಟನ' (ಇದು ಅವಕುಂಠನ) 'ಬುರುಕಿ' ಅಂತೆ, ಮೇಲಿಂದ ಕೆಳಕ್ಕೆ 4ರಲ್ಲಿ 'ಇಂಪಾದ ದನಿ' 'ನುಣ್ಜರ'ವಂತೆ. ಹಾಗೇ ಎಡದಿಂದ ಬಲ 17ರಲ್ಲಿ 'ಕುದುರೆ/ಎತ್ತಿನ ಮೇಲೆ ನೀರು ಒಯ್ಯುವ ಚೀಲ 'ಪಕಾಲಿ' ಅಂತೆ.'
'ಇದು ಯಾವ ನಿಘಂಟಿನಲ್ಲಿದೆ/ಬಳಕೆಯಲ್ಲಿದೆ. ಶ್ರೀವಾಸುಕಿಯವರೇ ಬಲ್ಲರು. ಇಂಥ ಪದಬಂಧದಿಂದ ಯಾರಿಗೂ ಉಪಯೋಗವಿಲ್ಲ' ಎಂದಿದ್ದಾರೆ.
ಬಳಕೆಯಲ್ಲಿರುವ ಶಬ್ದವನ್ನೇ ಪದಬಂಧದಲ್ಲಿ ಬಳಸಬೇಕು ಎಂಬ ನಿಯಮವೇನಿಲ್ಲ. ಅದರಲ್ಲೂ ವಿಶೇಷವಾಗಿ ಪದಬಂಧದಲ್ಲಿ ಓದುಗರಿಗೆ ಸವಾಲಿರುವುದೇ ಅಪರೂಪದ ಶಬ್ದಗಳನ್ನು ಹುಡುಕುವುದರಲ್ಲಿ. ಕನ್ನಡದಲ್ಲಿ ಒಂದೇ ಅರ್ಥ ನೀಡುವ ಹಲವು ಶಬ್ದಗಳಿವೆ. ಕೆಲವು ಬಳಕೆಯಲ್ಲಿರದೇ ಇರಬಹುದು. ಆದರೆ ಪದಬಂಧದ ಮೂಲಕವಾದರೂ ಓದುಗರಿಗೆ ಅಂತಹ ಶಬ್ದಗಳ ಪರಿಚಯವಾದಂತಾಗುತ್ತದೆ.
-ವಿಶ್ವೇಶ್ವರಭಟ್