ದೇಶ

ಪ.ಬಂಗಾಳದಲ್ಲಿ ಪ್ರಚಾರ 1 ದಿನ ಕಡಿತ, ಆಯೋಗದ ಕ್ರಮದ ವಿರುದ್ಧ ಮಾಯಾವತಿ ಕಿಡಿ, ದೀದಿಗೆ ಬೆಂಬಲ!

Srinivasamurthy VN
ಲಖನೌ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಅವಧಿಯನ್ನು 1 ದಿನ ಕಡಿತ ಮಾಡಿದ ಚುನಾವಣಾ ಆಯೋಗ ನಿರ್ಧಾರ ಸರಿಯಲ್ಲ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ನಿನ್ನೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ಸಂಭವಿಸಿದ್ದ ಹಿಂಸಾಚಾರ ಮತ್ತು ಆ ಬಳಿಕ ನಡೆದ ಕಾರ್ಯಕರ್ತರ ಸಂಘರ್ಷ ಮುಂದಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ತನ್ನ ಸಾಂವಿಧಾನಿಕ ಹಕ್ಕು ಚಲಾವಣೆ ಮಾಡಿ ಬಂಗಾಳಗಲ್ಲಿ ಪ್ರಚಾರದ ಅವಧಿಯನ್ನು 1 ಕಡಿತ ಮಾಡಿತ್ತು. ಈ ವಿಚಾರ ಇದೀಗ ದೇಶದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಆಯೋಗದ ನಿರ್ಧಾರವನ್ನು ವಿಪಕ್ಷಗಳು ಖಂಡಿಸಿವೆ.
ಇಂದು ಬೆಳಗ್ಗೆಯಷ್ಟೇ ಈ ಬಗ್ಗೆ ಮಾತನಾಡಿದ್ದ ಪಶ್ಚಿಮ ಬಂಗಾಳ ಸಿಎಂ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, 'ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇಲ್ಲವೇ ಇಲ್ಲ. ಹಾಗಿದ್ದರೂ 324ನೇ ವಿಧಿಯ ಅನ್ವಯ ಆಯೋಗ ಕ್ರಮ ಕೈಗೊಂಡಿದೆ. ಆಯೋಗದ ಈ ಕ್ರಮ ಅಸಾಂವಿಧಾನಿಕ ಮತ್ತು ಅನೈತಿಕ. ಕೇವಲ ಬಿಜೆಪಿಗೆ ಅನುಕೂಲ ಮಾಡಿಕೊಡುವ ಕಾರಣದಿಂದಲೇ ಆಯೋಗ ಈ ಕ್ರಮ ಕೈಗೊಂಡಿದೆ. ಇದು ಬಿಜೆಪಿಗೆ ಆಯೋಗ ನೀಡಿರುವ ಉಡುಗೊರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ದೀದಿ ಹೇಳಿಕೆಯನ್ನು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಸಮರ್ಥಿಸಿಕೊಂಡಿದ್ದು, ಚುನಾವಣಾ ಆಯೋಗ ನಿರ್ಧಾರ ಸರಿಯಲ್ಲ ಎಂದು ಹೇಳಿದ್ದಾರೆ. ಸಂಘರ್ಷದ ಹಿನ್ನಲೆಯಲ್ಲಿ ಪ್ರಚಾರದ ಅವಧಿ ಕಡಿತಗೊಳಿಸಿದ ಆಯೋಗದ ಕ್ರಮವನ್ನು ನಾನು ಒಪ್ಪುತ್ತೇನೆ. ಆದರೆ ಇಂದು ರಾತ್ರಿ 10 ಗಂಟೆಯಿಂದಲೇ ಪ್ರಚಾರ ನಿಷೇಧಿಸಿರುವುದು ಸರಿಯಲ್ಲ. ಪಶ್ಚಿಮ ಬಂಗಾಳದಲ್ಲಿ ಇಂದು ಬಿಜೆಪಿ 2 ರ್ಯಾಲಿಗಳನ್ನು ಹಮ್ಮಿಕೊಂಡಿದೆ. ಆಯೋಗ ಪ್ರಚಾರ ನಿಷೇಧಿಸುವುದಾದರೆ ಇಂದಿನಿಂದಲೇ ಪ್ರಚಾರ ನಿಷೇಧಿಸಬಹುದಿತ್ತು. ಆದರೆ ಆಯೋಗದ ಕ್ರಮದಿಂದಾಗಿ ಬಿಜೆಪಿ ಪ್ರಚಾರಕ್ಕೆ ತೊಂದರೆಯಾಗಿಲ್ಲ. ಬದಲಿಗೆ ವಿಪಕ್ಷಗಳು ರ್ಯಾಲಿ ನಡೆಸದಂತಾಗಿದೆ. ಇದು ಆಯೋಗದ ತಾರತಮ್ಯ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ. ನಿಜಕ್ಕೂ ಆಯೋಗದ ಕ್ರಮ ಸರಿಯಲ್ಲ. ಆಯೋಗ ಕೇಂದ್ರ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎಂದು ಮಮತಾ ಕಿಡಿಕಾರಿದರು.
SCROLL FOR NEXT