ಕ.ಪ್ರ.ವಾರ್ತೆ , ಬಳ್ಳಾರಿ , ಏ.22
ಬಳ್ಳಾರಿ ಮತದಾರ ಶ್ರೀರಾಮುಲು ರಾಜಕೀಯ ಭವಿಷ್ಯದಲ್ಲಿ ಬೆಳಕು ನೀಡುತ್ತಾನೆಯೋ ಅಥವಾ ಕಾಂಗ್ರೆಸ್ ಕೋಟೆಯನ್ನು ಮತ್ತೆ ಭದ್ರಪಡಿಸಲು ಅಸ್ತು ಎಂದಿದ್ದಾನೆಯೋ ಎಂಬ ಕುತೂಹಲ ಹೆಚ್ಚಿದೆ.
ಕ್ಷೇತ್ರದ ಪಶ್ಚಿಮ ಕ್ಷೇತ್ರಗಳು ಕೈ ಹಿಡಿಯುವ ಪಕ್ಷ ಗೆಲವು ಸಾಧಿಸಲಿದೆ. ಅಲ್ಲಿ ಬಿಜೆಪಿ-ಕಾಂಗ್ರೆಸ್‌ಗೆ ಸರಿಸಮ ಮತ ಬಂದರೆ ಗೆಲುವು ಕಡಿಮೆ ಅಂತರದ್ದಾಗಿರಲಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಪ್ರಬಲ ಪೈಪೋಟಿ ಇದ್ದು, ಯಾರು ಗೆದ್ದರೂ ಭಾರಿ ಅಂತರ ಇರದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಪಶ್ಚಿಮ ತಾಲೂಕುಗಳ ಮತದಾರ ಮನಸ್ಸು ಬದಲಾಯಿಸಿದರೆ, 30-40 ಸಾವಿರ ಮತಗಳ ಅಂತರದ ಗೆಲುವು ಆದರೂ ಆಶ್ಚರ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ರಾಜಕೀಯ ಬೆಳವಣಿಗೆ ನಡೆದು ಹೋಗಿದೆ. ಎರಡೂ ಪಕ್ಷಗಳು 'ಗೆಲವು ತಮ್ಮದೇ' ಎಂದು ಈಗಾಗಲೇ ಬೀಗುತ್ತಿದ್ದರೂ, ಯಾರ ಗೆಲುವೂ ಅಷ್ಟು ಸುಲಭವಲ್ಲ ಎಂಬುದು ಸತ್ಯ.
ಆಮ್ ಆದ್ಮಿ, ಜೆಡಿಎಸ್, ಎಸ್‌ಯುಸಿಐ ಪಕ್ಷಗಳು ತೆಗೆದುಕೊಳ್ಳುವ ಮತಗಳು ಕೂಡ ಬಿಜೆಪಿ ಅಥವಾ ಕಾಂಗ್ರೆಸ್ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಮೂರು ವಿಧಾನಸಭೆ ಕ್ಷೇತ್ರಗಳ ಶಾಸಕರು ಜೈಲಿಗೆ ಹೋಗಿರುವುದರಿಂದ ಕ್ಷೇತ್ರದ ಮತದಾರರನ್ನು ಕಾಂಗ್ರೆಸ್ ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿದೆ. ಕೂಡ್ಲಿಗಿ ಕ್ಷೇತ್ರದಲ್ಲಿ ಶಾಸಕ ನಾಗೇಂದ್ರ ಪ್ರಭಾವವನ್ನು (ಬಿಜೆಪಿ ಪರ) ತಳ್ಳಿ ಹಾಕುವಂತಿಲ್ಲ. ಇನ್ನು ವಿಜಯನಗರ ಕ್ಷೇತ್ರದಲ್ಲಿ ಶಾಸಕ ಆನಂದ್‌ಸಿಂಗ್ ಪುತ್ರ ಮತ್ತು ತಂದೆಯವರು ಬಿಜೆಪಿಗೆ ಹೆಗಲು ಕೊಟ್ಟಿರುವುದು, ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಕ್‌ಔಟ್ ಮಾಡಿದೆಯೇ ಎಂಬುದರ ಆಧಾರದ ಮೇಲೆ ಫಲಿತಾಂಶ ನಿಂತಿದೆ.
ಕಾಂಗ್ರೆಸ್‌ಗೆ ಕೈ: ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಮತದಾರರ ನಡೆ ಹೆಚ್ಚು ಕುತೂಹಲಕಾರಿಯಾಗಿದೆ. ಸಿರಾಜ್ ಶೇಕ್ ಕಾಂಗ್ರೆಸ್ ಸೇರ್ಪಡೆ ರವೀಂದ್ರ ಮುನಿಸಿಗೆ ಕಾರಣವಾಗಿದೆ. ಹೂವಿನಹಡಗಲಿ ಕ್ಷೇತ್ರ ಈ ಬಾರಿ ಕಾಂಗ್ರೆಸ್‌ಗೆ ಕೈಕೊಡಲಿದೆ ಎಂಬ ಮಾತು ಕೇಳಿಬರುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಜಯಗಳಿಸಿದ್ದರು. ಇನ್ನು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ತಟಸ್ಥ ಉಳಿದಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ನೇಮಿರಾಜ ನಾಯ್ಕ್ ಬಿಜೆಪಿಗೆ ಹೆಚ್ಚಿನ ಬಲ ತಂದು ಕೊಡುವ ಸಾಧ್ಯತೆ ಇದೆ. ಇಂತಹ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಸಿರಾಜ್ ಶೇಕ್ ಬಲ ಪ್ಲಸ್ ಆಗಿದೆಯೇ ಎಂಬುದೇ ಕುತೂಹಲ. ಮೇಲಿನ ಕ್ಷೇತ್ರಗಳ ಮತದಾರ ಯಾರಿಗೆ ಒಲಿಯುತ್ತಾನೋ ಅವರ ಬಲ ಹೆಚ್ಚಲಿದೆ. ಇಲ್ಲಿ ಸಮಬಲ ಸಾಧಿಸಿದರೆ ಕಡಿಮೆ ಅಂತರದಲ್ಲಿ ಗೆಲುವು ಸಿಗಲಿದೆ.
ಸಂಡೂರಲ್ಲಿ ನಿರುತ್ಸಾಹ: ಸಂಡೂರು ಕಾಂಗ್ರೆಸ್ ಭದ್ರಕೋಟೆಯಾದರೂ, ಈ ಬಾರಿ ಕಾಂಗ್ರೆಸ್‌ಗೆ ಸಂಡೂರು ಕ್ಷೇತ್ರ ಕಳೆದ ಬಾರಿಯಷ್ಟು ಲೀಡ್ ತಂದು ಕೊಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಕಾರಣ, ಸಂಡೂರು ಕ್ಷೇತ್ರದವರಾದ ಕಲಘಟಗಿ ಶಾಸಕ ಸಂತೋಷ್ ಲಾಡ್ ಪ್ರಭಾವ ಕಡೆಗಣಿಸುವಂತಿಲ್ಲ.
-ಶಶಿಧರ ಮೇಟಿ