ಚಾಮರಾಜನಗರ: ಈ ಬಾರಿಯ ಚುನಾವಣೆ ಫಲಿತಾಂಶಕ್ಕಾಗಿ ಒಂದು ತಿಂಗಳು ಕಾಯಬೇಕಾದ ಪರಿಣಾಮ, ಪರೀಕ್ಷೆ ಸಮಯದಲ್ಲಿ ನಡೆಯುವ ಪ್ರಾಯೋಗಿಕ ತರಗತಿಗಳಿಂದ ವಿದ್ಯಾರ್ಥಿಗಳು ವಂಚಿತರಾಗಬೇಕಾಗಿದೆ.
ಚಾಮರಾಜನಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇಡಲಾಗಿದ್ದು, ಭದ್ರತಾ ಕೊಠಡಿಯ 200 ಮೀಟರ್ ಸುತ್ತಲ ಪ್ರದೇಶವನ್ನು ಸಿಆರ್‌ಪಿಸಿ ಸೆಕ್ಷನ್ 144 ಹಾಗೂ 144ಎ ಅನ್ವಯ ಏ.17 ರಿಂದ ಮೇ16ರ ವರೆಗೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಆದರೆ, ಈ ಆದೇಶ ಚುನಾವಣಾ ಕರ್ತವ್ಯ, ಮತ ಎಣಿಕೆ ಕೇಂದ್ರದ ಭದ್ರತಾ ಮೇಲ್ವಿಚಾರಣೆಗೆ ನಿಯೋಜನೆಗೊಂಡು ಗುರುತಿನ ಚೀಟಿ ಹೊಂದಿರುವ ಅಧಿಕಾರಿ ನೌಕರರ ಹಾಗೂ ಎಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕ, ಸಿಬ್ಬಂದಿವರ್ಗ, ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಎಂ ಕುಂಜಪ್ಪ ಘೋಷಿಸಿದ್ದರು. ಇದೀಗ ಏಕಾಏಕಿ ಅಭ್ಯರ್ಥಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರೆಂಬ ಕಾರಣಕ್ಕೆ, ಜಿಲ್ಲಾಧಿಕಾರಿ ಎಲ್ಲರಿಗೂ ಸಿಆರ್‌ಪಿಸಿ ಸೆಕ್ಷನ್ ಅನ್ವಯವಾಗಲಿದ್ದು, ಮತ ಯಂತ್ರ ಇಟ್ಟಿರುವ ಬ್ಲಾಕ್‌ನಲ್ಲಿ ತರಗತಿ ನಡೆಸದಂತೆ ಬುಧವಾರ ಆದೇಶ ಹೊರಡಿಸಿದ್ದಾರೆ. ಇದರ ಪರಿಣಾಮ ಪ್ರಯೋಗಿಕ ತರಗತಿಗಳು ರದ್ದಾಗಿವೆ.