ಇದು ರಾಜ್ಯದ ಕಬ್ಬು ಬೆಳೆಗಾರರ ಪ್ರಶ್ನೆ ಟಿ ಸರ್ಕಾರದ ಆದೇಶದ ಪ್ರಕಾರ 2500 ದರ ನೀಡದೆ ಕೇವಲ 2000 ದರ ನೀಡಿದೆ ಟಿ ಸುವರ್ಣ ವಿಧಾನಸೌಧದ ಎದುರೇ ರೈತನೊಬ್ಬ ನ್ಯಾಯಯುತ ದರಕ್ಕೆ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಂಡ ಟಿ ಆಗಲೂ ಕಾರ್ಖಾನೆಯವರ ಮನ ಕರಗಲಿಲ್ಲ
ಬೆಳಗಾವಿ: ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ನಡುವಿನ ನಿರಂತರ ದರ ಸಮರದ ನಡುವೆಯೂ ಈ ಬಾರಿ ರಾಜ್ಯದಲ್ಲಿ ಎಲ್ಲ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮನ್ನು ಪೂರ್ಣಗೊಳಿಸಿವೆ.
ಜೊತೆಗೆ ಅತಿ ಹೆಚ್ಚು ಸಕ್ಕರೆ ಉತ್ಪಾದಿಸಿ, ದಾಖಲೆ ನಿರ್ಮಿಸಿದ್ದರೂ ಕಬ್ಬು ಬೆಳಗಾರರು ಮಾತ್ರ ನ್ಯಾಯಯುತ ದರ ಸಿಗದೆ ಕಣ್ಣೀರಿನಲ್ಲಿಯೇ ಕೈತೊಳೆಯುವಂತಾಗಿದೆ. ಏಪ್ರಿಲ್ 15ರ ವರೆಗೆ ಕಬ್ಬು ನುರಿಸಿ ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ಕಾರ್ಯ ಸ್ಥಗಿತಗೊಳಿಸಿವೆ. ಕಬ್ಬು ಬೆಳೆಗಾರರ ಪ್ರತಿಟನ್ ಕಬ್ಬಿಗೆ 2500 ದರದಂತೆ ಬಿಲ್ ಪಾವತಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸುತ್ತಿರುವ ಖಾಸಗಿ ಕಾರ್ಖಾನೆಗಳ ಆಡಳಿತ ಮಂಡಳಿಗೂ ಇಷ್ಟೊಂದು ಕಬ್ಬಿನ ಬಿಲ್ ಕೊಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಇದರಿಂದ ಸರ್ಕಾರ ಮತ್ತು ಕಾರ್ಖಾನೆ ಆಡಳಿತ ಮಂಡಳಿ ನಡುವೆ ಸಮರ ನಡೆಯುತ್ತಿದೆ. ರೈತರಿಗೆ ಮಾತ್ರ ಕಾರ್ಖಾನೆಯವರು 2000 ದರದಲ್ಲಿ ಕಬ್ಬಿನ ಬಿಲ್ ಪಾವತಿ ಮಾಡಿದ್ದಾರೆ. ಪ್ರತಿ ಟನ್ ಕಬ್ಬಿಗೆ ಇನ್ನೂ 500 ಬಾಕಿ ಪಾವತಿಸಬೇಕಾಗಿದೆ. ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಒಟ್ಟು ಬಾಕಿ 1850 ಕೋಟಿ.
ನಷ್ಟದ ಕೂಪದಲ್ಲಿ ಸಹಕಾರಿ ಉದ್ಯಮ: ಸ್ವಜನ ಪಕ್ಷಪಾತ, ಸಹಕಾರಿ ಕಾರ್ಖಾನೆಗಳಲ್ಲಿರುವ ಕೋಟ್ಯಂತರ ರುಪಾಯಿ ಭ್ರಷ್ಟಾಚಾರ ಮುಂತಾದ ಕಾರಣಗಳಿಂದಾಗಿ ರೈತರ ಕೈಯಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದಲೂ ಕಬ್ಬಿಗೆ ಯೋಗ್ಯ ದರ ದೊರೆಯುತ್ತಿಲ್ಲ ಎನ್ನುವ ಕೂಗು ಪ್ರತಿಧ್ವನಿಸುತ್ತಿದೆ. ಸರ್ಕಾರದ ಶೋಷಣೆ ವಿರುದ್ಧ ಪ್ರತಿಭಟಿಸುತ್ತಿದ್ದ ವೇಳೆ ಸುವರ್ಣಸೌಧದ ಎದುರು ಬೆಳಗಾವಿ ಜಿಲ್ಲೆಯ ರೈತ ವಿಠಲ ಅರಬಾವಿ ಎಂಬುವರು ಆತ್ಮಹತ್ಯೆ ಮಾಡಿಕೊಂಡರೂ ಕಾರ್ಖಾನೆಯವರು ರೈತರಿಗೆ ನ್ಯಾಯಯುತ ಕಬ್ಬಿನ ದರ ನೀಡುತ್ತಿಲ್ಲ ಎಂದು ರೈತ ಮುಖಂಡ ಟಿ.ಚಿ ಮರಕಟ್ನಾಳ ಆರೋಪಿಸುತ್ತಾರೆ. ಇಲ್ಲಿಯವರೆಗೂ ಪ್ರತಿಟನ್ಗೆ 2500 ಬಿಲ್ ಕೊಡಿಸಲು ಸರ್ಕಾರಕ್ಕೂ ಸಾಧ್ಯವಾಗಿಲ್ಲ. ಸರ್ಕಾರ ಮತ್ತು ಕಾರ್ಖಾನೆಗಳ ವ್ಯಾಜ್ಯವೀಗ ಹೈಕೋರ್ಟ್ ಮುಂದಿದೆ. ಸರ್ಕಾರಕ್ಕಿಂತಲೂ ಪ್ರಬಲವಾಗಿರುವ 'ಶುಗರ್ ಲಾಬಿ' ಕಳೆದ 50 ವರ್ಷಗಳಲ್ಲಿ ಕಬ್ಬಿನ ಸಿಹಿ ಉಂಡಿವೆ. ಶುಗರ್ಸ್ ಕುಳಗಳಿಗೆ ರೈತರ ಹೋರಾಟ ಹತ್ತಿಕ್ಕುವುದು, ಸರ್ಕಾರವನ್ನು ಹೇಗೆ ಮಣಿಸಬೇಕೆಂಬುದು ಗೊತ್ತಿದೆ. ಹೀಗಾಗಿಯೇ ಕಾರ್ಖಾನೆ ಆಡಳಿತ ಮಂಡಳಿಗಳು ರೈತರಿಗೆ ಪಾವತಿಯಾಗಬೇಕಿರುವ ಕಬ್ಬಿನ್ ಬಿಲ್ಅನ್ನು ಸಕಾಲಕ್ಕೆ ಪಾವತಿ ಮಾಡದೆ ಸಕ್ಕರೆ ಮಾರಾಟವಾಗಿಲ್ಲ ಎಂಬ ನೆಪ ಹೇಳುತ್ತಲೇ ಕೆಲವೊಂದು ಕಾರ್ಖಾನೆಗಳು ವಿಳಂಬವಾಗಿ ಬಿಲ್ ಪಾವತಿಸುತ್ತಿವೆ ಎಂದರು.
350 ಕೋಟಿ ಪ್ರೋತ್ಸಾಹ ಧನ ಡಿಸಿ ಅಕೌಂಟ್ಗೆ: ಬಾಕಿ ಹಣ ಪಾವತಿಸದೇ ಇರುವ ಕಾರ್ಖಾನೆಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಸರ್ಕಾರ ಹೇಳಿದಷ್ಟು ಟನ್ಗೆ 2500 ದರ ಕೊಡಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದರಿಂದಲೇ ದರ-ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಕುರಿತು ರಾಜ್ಯ ಸಕ್ಕರೆ ಇಲಾಖೆ ಅಧಿಕಾರಿಗಳನ್ನು ಮಾತನಾಡಿಸಿದರೇ, ಈ ಪ್ರಕರಣ ಹೈಕೋರ್ಟ್ದಲ್ಲಿದೆ. ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಪ್ರತಿ ಟನ್ಗೆ 150 ಪ್ರೋತ್ಸಾಹ ಧನ ನೀಡುವುದಾಗಿ ನೀಡಿದ್ದ ಭರವಸೆಯಂತೆ ಆಯಾ ಜಿಲ್ಲೆಯ ಕಾರ್ಖಾನೆಗಳು ಕಬ್ಬು ನುರಿಸಿದ ಪ್ರಕಾರ ಟನ್ಗೆ 150ರುಪಾಯಿಗಳಂತೆ ರಾಜ್ಯದ 24 ಜಿಲ್ಲಾಧಿಕಾರಿಗಳ ಖಾತೆಗೆ 350 ಕೋಟಿ ಸರ್ಕಾರ ಜಮಾ ಮಾಡಿದೆ ಎಂದು ಸಕ್ಕರೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಕಬ್ಬು ನುರಿತ 370ಲಕ್ಷ ಟನ್
ರಾಜ್ಯಾದ್ಯಂತ 60 ಸಕ್ಕರೆ ಕಾರ್ಖಾನೆಗಳಿದ್ದು, ಈ ಪೈಕಿ 19 ಸಹಕಾರಿ, 37 ಖಾಸಗಿ ಕಾರ್ಖಾನೆ ಹಾಗೂ 2 ಸಾರ್ವಜನಿಕ ಸಕ್ಕರೆ ಕಾರ್ಖಾನೆಗಳಿವೆ. ಈ ಎಲ್ಲ ಕಾರ್ಖಾನೆಗಳು ಸೇರಿ ಕಳೆದ ಆರೂವರೆ ತಿಂಗಳಲ್ಲಿ (ಕಳೆದ ಅಕ್ಟೋಬರ್ 1ರಿಂದ ಏಪ್ರಿಲ್ 15ರ ವರೆಗೆ) 3 ಕೋಟಿ 70 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 40 ಲಕ್ಷ 66 ಸಾವಿರ ಮೆಟ್ರಿಕ್ಟನ್ ಸಕ್ಕರೆ ಉತ್ಪಾದಿಸಿವೆ. ರಾಜ್ಯದ ಬಹುತೇಕ ಸಕ್ಕರೆ ಎಲ್ಲ ಕಾರ್ಖಾನೆಗಳು ಟನ್ಗೆ 2 ಸಾವಿರ ಮಾತ್ರ ರೈತರಿಗೆ ಪಾವತಿ ಮಾಡಿವೆ. ಸರ್ಕಾರದ ಅಧಿಸೂಚನೆಯಂತೆ ಇನ್ನ್ನೂ ಪ್ರತಿಟನ್ಗೆ 500 ರುಪಾಯಿ ಕೊಡಬೇಕಿದೆ. ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಬೀದರ, ಗುಲ್ಬರ್ಗ ಮಂಡ್ಯ ಸೇರಿದಂತೆ ರಾಜ್ಯದ ಎಲ್ಲ ಕಾರ್ಖಾನೆಗಳು ಸೇರಿ 1850.41 ಕೋಟಿ ಬಾಕಿ ಹಣ ಕೊಡಬೇಕಾಗಿದೆ.
ಉಗ್ರ ಹೋರಾಟ
ರೈತರಿಗೆ ದೊರಯಬೇಕಿರುವ ಬಾಕಿ ಕಬ್ಬಿನ ಬಿಲ್ಅನ್ನು ಸಕಾಲಕ್ಕೆ ಪಾವತಿಸದಿದ್ದರೆ, ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಕಬ್ಬು ಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಎಚ್ಚರಿಕೆ ನೀಡುತ್ತಿದ್ದಾರೆ.
- ರಾಯಣ್ಣ ಆರ್.ಸಿ.