ಅಪಘಾತ: ಆಂಧ್ರ ಶಾಸಕಿ ಸಾವು
ಹೈದರಾಬಾದ್: ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೈಎಸ್‌ಆರ್ ಕಾಂಗ್ರೆಸ್ ಶಾಸಕಿ ಬಿ. ಶೋಭಾ ನಾಗಿ ರೆಡ್ಡಿ (46) ಮೃತಪಟ್ಟಿದ್ದಾರೆ. ಕರ್ನೂಲ್‌ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ರಾತ್ರಿ ಹಿಂತಿರುಗುತ್ತಿದ್ದಾಗ ನಡೆದ ಅಪಘಾತದಲ್ಲಿ ಶೋಭಾ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಬಂಜಾರಾ ಹಿಲ್ಸ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದರು. ರೈತರು ಕಟಾವು ಮಾಡಿದ ಭತ್ತವನ್ನು ರಸ್ತೆಯಲ್ಲಿ ಹರಡಿದ್ದ ಹಿನ್ನೆಲೆಯಲ್ಲಿ ಶೋಭಾ ಅವರಿದ್ದ ಕಾರು ನಿಯಂತ್ರಣ ಕಳೆದುಕೊಂಡು ಪಲ್ಪಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಶೋಭಾ ಅಲ್ಲಗಡ್ಡ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ.
ಗಿರಿರಾಜ್‌ಸಿಂಗ್ ನಾಪತ್ತೆ
ಪಟನಾ: ಪ್ರಚೋದನಕಾರಿ ಭಾಷಣ ಮಾಡಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಗುರುವಾರ ನಿರೀಕ್ಷಣಾ ಜಾಮೀನಿಗಾಗಿ ಪಟನಾದ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಅವರು ಗುರುವಾರ ಶರಣಾಗುವುದಾಗಿ ಹೇಳಿದ್ದರೂ ಆ ರೀತಿ ನಡೆದುಕೊಂಡಿಲ್ಲ. ಅದಕ್ಕೆ ಪೂರಕವಾಗಿ ಬಿಹಾರ ಮತ್ತು ಜಾರ್ಖಂಡ್ ಪೊಲೀಸರು ಗಿರಿರಾಜ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಅರ್ಜಿಯ ವಿಚಾರಣೆ ನಡೆಯಲಿದೆ.
ಖಾತೆಗೆ ಆಯೋಗ ಕಣ್ಣು
ಡೆಹ್ರಾಡೂನ್: ಯೋಗಗುರು ಬಾಬಾ ರಾಮ್‌ದೇವ್ ಅವರ ಟ್ರಸ್ಟ್‌ಗೆ ಸಂಬಂಧಿಸಿದ ಮೂರು ಬ್ಯಾಂಕ್ ಖಾತೆಗಳ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗ ಪರಿಶೀಲಿಸುತ್ತಿದೆ. ಅವರ ಖಾತೆಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ಸಂದಾಯವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆಯೋಗ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸುತ್ತಿದೆ.
ಕಟಿಯಾರ್, ಬೇಣಿಗೆ ನೋಟಿಸ್
ನವದೆಹಲಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ ಮತ್ತು ಬಿಜೆಪಿ ನಾಯಕ ವಿನಯ ಕಟಿಯಾರ್‌ಗೆ ನೋಟಿಸ್ ಜಾರಿ ಮಾಡಿದೆ. ಶನಿವಾರದ ಒಳಗಾಗಿ ಅವರಿಬ್ಬರಿಗೂ ಉತ್ತರ ನೀಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಮೋದಿಯವರನ್ನು ದೊಡ್ಡ ಗೂಂಡಾ ಎಂದಿದ್ದಕ್ಕೆ ಆಯೋಗ ಅತೃಪ್ತಿ ವ್ಯಕ್ತಪಡಿಸಿದೆ. ಏ.15ರಂದು ವಿನಯ ಕಟಿಯಾರ್ ಮಾಡಿದ ಭಾಷಣದ ಬಗ್ಗೆ ನೋಟಿಸ್ ನೀಡಿದೆ.
ತೆಲಂಗಾಣದಿಂದ ನಷ್ಟವಿಲ್ಲ
ರಾಜಮುಂಡ್ರಿ: ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಚಿಸಿದ್ದರಿಂದ ನಷ್ಟವಿಲ್ಲ. ಇದರಿಂದಾಗಿ ಹಿಂದುಳಿದ ಪ್ರದೇಶದ ಅಭಿವೃದ್ಧಿಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಚಿರಂಜೀವಿ ಪ್ರತಿಪಾದಿಸಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಂಧ್ರದದ ಹಿಂದುಳಿದ ಪ್ರದೇಶಗಳಿಗೆ ಕಾಂಗ್ರೆಸ್ ವಿಶೇಷ ಪ್ಯಾಕೇಜ್ ಕಲ್ಪಿಸಲಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯ ವಿಭಜನೆ ಬಳಿಕ ಪೊಲವರಂ ಯೋಜನೆ ಸೀಮಾಂಧ್ರದ ರೈತರಿಗೆ ಲಾಭವಾಗಲಿದೆ ಎಂದರು.