ನವದೆಹಲಿ: ಲೋಕಪಾಲ ಮುಖ್ಯಸ್ಥರು ಹಾಗೂ ಸದಸ್ಯರ ನೇಮಕ ವಿಚಾರದಲ್ಲಿ ಆತುರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ಗೆ ಭರವಸೆ ನೀಡಿದೆ. ಈ ಮೂಲಕ ಲೋಕಪಾಲ ನೇಮಕ ವಿಚಾರವನ್ನು ಮುಂದಿನ ಸರ್ಕಾರಕ್ಕೆ ಬಿಡುವುದಾಗಿ ಸರ್ಕಾರ ಪರೋಕ್ಷವಾಗಿ ಹೇಳಿದೆ. ಲೋಕಪಾಲ ನೇಮಕ ಪ್ರಕ್ರಿಯೆಗೆ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುತ್ತಿದೆ. ಇದಕ್ಕೆ ತಡೆನೀಡಬೇಕೆಂದು ಕೋರಿ 'ಕಾಮನ್ ಕಾಸ್' ಎನ್ನುವ ಎನ್‌ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಲೋಕಪಾಲ ನೇಮಕಕ್ಕೆ ಸಂಬಂಧಿಸಿ ಸರ್ಕಾರ ಆತುರ ತೋರುತ್ತಿಲ್ಲ ಎಂದು ಸರ್ಕಾರದ ಪರ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಲೋಕಪಾಲ ನೇಮಕ ಪ್ರಕ್ರಿಯೆ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಲೋಕಪಾಲ ನೇಮಕ ಪ್ರಕ್ರಿಯೆಗೆ ಸಂಬಂಧಿಸಿ ಸರ್ಕಾರ ಆತುರದ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಎನ್‌ಜಿಒ ವಾದಿಸಿತ್ತು.