ಬಳ್ಳಾರಿ: ಆಂಧ್ರಪ್ರದೇಶದ ವೈಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ 500ಕ್ಕೂ ಹೆಚ್ಚು ಜನರಿಗೆ ಸ್ಥಳೀಯ ಬಿಜೆಪಿ ಮುಖಂಡರು ಬಾಡೂಟ ಹಾಕಿ, ಸಭೆ ಸೇರಿಸಿದ್ದಾರೆ ಎಂಬ ಮಾಹಿತಿ ಆಧರಿಸಿ ಬಳ್ಳಾರಿಯ ಪ್ರಭಾರಿ ತಹಸೀಲ್ದಾರ್, ಗ್ರಾಮೀಣ ಪೊಲೀಸರು ದಾಳಿ ನಡೆಸಿ 28 ವಾಹನ, ಅಡುಗೆ ಸಾಮಗ್ರಿ, ಬಿರಿಯಾನಿ ವಶಪಡಿಸಿಕೊಂಡ ಘಟನೆ ಗುರುವಾರ ನಗರದ ಬೆಳಗಲ್ ರಸ್ತೆಯಲ್ಲಿರುವ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮದಲ್ಲಿ ನಡೆದಿದೆ.
ಆಂಧ್ರದಲ್ಲಿ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್‌ನವರು ಎನ್ನಲಾದ 500ಕ್ಕೂ ಹೆಚ್ಚು ಕಾರ್ಯಕರ್ತರು ಆಂಧ್ರದ ರಾಯದುರ್ಗ, ಹಿರಾಳ್ ಮತ್ತಿತರ ಕಡೆಗಳಿಂದ ಆಗಮಿಸಿದ್ದು, ಅವರಿಗೆ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್, ಗ್ರಾಮೀಣ ಠಾಣೆ ಪಿಎಸ್‌ಐ ವಸಂತಕುಮಾರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ. ತಹಸೀಲ್ದಾರ್ ನೀಡಿದ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.