ಕ.ಪ್ರ. ವಾರ್ತೆ , ಬೆಂಗಳೂರು , ಏ.26
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವುದರ ಮೂಲಕ ಎ.ಕೃಷ್ಣಪ್ಪ ಅವರ ನಿಧನಕ್ಕೆ ನಿಜವಾದ ಶ್ರದ್ಧಾಂಜಲಿ ಅರ್ಪಿಸುವ ಕೆಲಸ ಮಾಡಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.
ಮಾಜಿ ಸಚಿವ ಎ.ಕೃಷ್ಣಪ್ಪ ನಿಧನಕ್ಕೆ ಸಂತಾಪ ಸೂಚಿಸಿ ಪಕ್ಷದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ಶ್ರದ್ಧಾಂಜಲಿ'ಸಭೆಯಲ್ಲಿ ಅವರು ಮಾತನಾಡಿದರು. ಕೃಷ್ಣಪ್ಪ ಅವರನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು. 'ಇದು ಘೋರವಾದ ಶಿಕ್ಷೆ'ಎಂದು ಗದ್ಗದಿತರಾದರು.
ಆಘಾತಗಳ ಮೇಲೆ ಆಘಾತ. ದೇವರು ಸತ್ವ ಪರೀಕ್ಷೆಗೆ ಒಡ್ಡುತ್ತಲೇ ಇದ್ದಾನೆ. ಆದರೂ ಎದೆಗುಂದುವುದು ಬೇಡ, ಹೋರಾಡೋಣ. ರಾಜ್ಯದಲ್ಲಿ ಜೆಡಿಎಸ್ ಮೂಲಕ ಜನರಿಗೆ ಯೋಗ್ಯವಾದ ಸರ್ಕಾರವನ್ನು ತರುವ ತನಕ ವಿಶ್ರಮಿಸುವುದು ಬೇಡ ಎಂದರು.
ಕೃಷ್ಣಪ್ಪ ಭೌತಿಕವಾಗಿ ಈಗ ನಮ್ಮೊಂದಿಗಿಲ್ಲ. ಆದರೆ ಅವರ ಆತ್ಮ ನಮ್ಮೊಂದಿಗೆಯೇ ಇದೆ. ಅವರ ಹೋರಾಟದ ಸ್ಫೂರ್ತಿಯಲ್ಲಿ ಸರಿಯಾದ ಮಾರ್ಗದೊಂದಿಗೆ ಹೋರಾಡೋಣ. ಪಕ್ಷವನ್ನು ಬಲಿಷ್ಠಗೊಳಿಸಿ, ಅಧಿಕಾರಕ್ಕೆ ತರುವ ಮೂಲಕ ಅವರ ನಿಧನಕ್ಕೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು. ನಾಯಕನನ್ನು ಕಳೆದುಕೊಂಡ ಪಕ್ಷ ಬಡವಾದಂತೆ, ಅವರ ಕುಟುಂಬದವರು ನೋವಿನಲ್ಲಿದ್ದಾರೆ. ಅವರಿಗೆ ದೇವರು ದುಖಃ ತಡೆದುಕೊಳ್ಳುವ ಶಕ್ತಿ ಕೊಡಲಿ. ಪಕ್ಷ ಅವರ ಕಷ್ಟಕ್ಕೆ ಹೆಗಲು ನೀಡಲಿದೆ ಎಂದು ಧೈರ್ಯ ತುಂಬಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಕೃಷ್ಣಪ್ಪ ಬದ್ಧತೆ ನಾಯಕರಾಗಿದ್ದರು. ಪಕ್ಷದ ಸಂಘಟನೆಗೆ ಆಯಾಸ ಲೆಕ್ಕಿಸದೆ ಓಡಾಡಿದ್ದರು. ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಗೆಲವು ಖಚಿತ. ಹೀಗಾಗಿಯೇ ತಾವು ಸಿಂಗಾಪುರಕ್ಕೆ ಹೊರಟ ಸಂದರ್ಭದಲ್ಲಿ ದೇವೇಗೌಡರು ಮಾತನಾಡುತ್ತಾ, ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಲಿದ್ದು, ಅಲ್ಲಿ ಕೃಷ್ಣಪ್ಪ ಅವರನ್ನು ಮಂತ್ರಿ ಮಾಡೋಣ ಅಂತ ಹೇಳಿದ್ದರು. ಅದು ಅವರ ಅಭಿಲಾಷೆಯೂ ಆಗಿತ್ತು. ಆದರೆ ಫಲಿತಾಂಶ ಬರುವ ಮುನ್ನವೇ ಕಷ್ಣಪ್ಪ ಇಲ್ಲದಿರುವುದು ತೀವ್ರ ನೋವು ತರಿಸಿದೆ ಎಂದು ಕುಮಾರಸ್ವಾಮಿ ಭಾವುಕರಾದರು.
ಕೆಲವರಿಗೆ ಇವತ್ತು ಅಧಿಕಾರವೇ ಮುಖ್ಯವಾಗಿದೆ. ಆದರೆ ಕೃಷ್ಣಪ್ಪ ಯಾವುದೇ ಅಧಿಕಾರ ಬಯಸದೆ ಪಕ್ಷಕ್ಕೆ ಬಂದಿದ್ದರು. ಹಿಂದುಳಿದ ಸಮುದಾಯಕ್ಕೆ ಶಕ್ತಿ ತುಂಬುವ ಕಾರಣದಿಂದ ಕೃಷ್ಣಪ್ಪ ಅವರನ್ನೆ ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈಗ ಅವರ ನಿಧನದಿಂದ ಯಾದವ ಸಮುದಾಯ ಕೂಡ ನೋವು ಅನುಭವಿಸುತ್ತಿದೆ ಎಂದು ವಿಷಾದಿಸಿದರು.
ಮುಖಂಡರಾದ ಬಂಡೆಪ್ಪ ಕಾಶಂಪೂರ್, ಅಬ್ದುಲ್ ಅಜೀಂ, ಸುರೇಶ್ ಬಾಬು, ಕೃಷ್ಣಪ್ಪ ಪುತ್ರಿ ಹಾಗೂ ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಸಭೆಯಲ್ಲಿ ಹಾಜರಿದ್ದರು.
ಫಲಿತಾಂಶದ ನಂತರ ಅಧ್ಯಕ್ಷರ ಆಯ್ಕೆ
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಪಕ್ಷದ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು. 'ಶ್ರದ್ಧಾಂಜಲಿ'ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಪಕ್ಷದ ಹಂಗಾಮಿ ಅಧ್ಯಕ್ಷರನ್ನಾಗಿ ನಾರಾಯಣ ರಾವ್ ಅವರನ್ನು ನೇಮಕ ಮಾಡಲಾಗಿದೆ. ಕಾರ್ಯಕಾರಿ ಸಭೆ ಕರೆದು ಒಮ್ಮತದ ತೀರ್ಮಾನದೊಂದಿಗೆ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದರು.