ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಬೆಂಗಳೂರು ಮಹಾನಗರ ಜನತಾದಳ ಕಾರ್ಮಿಕ ವಿಭಾಗದಿಂದ ಗುರುವಾರ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ವಿಶ್ವಕಾರ್ಮಿಕ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ರೈತರು ಸೇರಿದಂತೆ ಎಲ್ಲಾ ಪ್ರಜೆಗಳು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು ಕೂಡಲೇ ವಿಪಕ್ಷಗಳ ಸಭೆ ಕರೆಯಬೇಕು. ಬರ ನಿರ್ವಹಣೆ ಹಾಗೂ ಅದಕ್ಕೆ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು.
ಸದ್ಯ ರಾಜ್ಯದ ಜನತೆ ಪ್ರಮುಖವಾಗಿ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಆ ಸಮಸ್ಯೆಯನ್ನು ಸರ್ಕಾರ ಬಗೆಹರಿಸಬೇಕಿದೆ. ಇಲ್ಲವಾದಲ್ಲಿ ನೀರಿನ ಹಾಹಾಕಾರದಿಂದ ಜನ, ಜಾನುವಾರುಗಳ ಪ್ರಾಣ ಕಳೆದುಕೊಳ್ಳುವ ದಿನಗಳು ದೂರವಿಲ್ಲ. ಹಾಗಾಗಿ ಮೊದಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದರ ಜತೆಗೆ ಮಳೆ ನೀರನ್ನು ಇಂಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಬಂಗಲೆ ನವೀಕರಣಕ್ಕೆ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿ ಕಾರಿದ ಅವರು, ರಾಜ್ಯದಲ್ಲಿ ಬರಪರಿಸ್ಥಿತಿ ಇರುವಾಗ
ಈ ರೀತಿ ದುಂದುವೆಚ್ಚ ಮಾಡುವುದು ಸೂಕ್ತವಲ್ಲ. ಆ ಹಣವನ್ನು ಜನರಿಗೆ ಹಾಗೂ ಅವರ ಸಮಸ್ಯೆ ಪರಿಹರಿಸಲು ಉಪಯೋಗಿಸಲಿ ಎಂದರು.