ಜೊಹಾನ್ಸ್‌ಬರ್ಗ್: ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೊಂದು ಖುಷಿಯ ಸುದ್ದಿ!
ಮಹದೇವಪ್ಪ ಸರ್ಕಾರಿ ಬಂಗಲೆಯನ್ನು 2 ಕೋಟಿ ವೆಚ್ಚ ಮಾಡಿ ನವೀಕರಣ ಮಾಡಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಮಹದೇವಪ್ಪರನ್ನು ಮೀರಿಸುವ ರಾಜಕಾರಣಿಯೊಬ್ಬರಿದ್ದಾರೆ. ಅವರು ದೇಶದ ಅಧ್ಯಕ್ಷ ಜಾಕೊಬ್ ಝುಮಾ! ಮಹದೇವಪ್ಪ ರೀತಿಯಲ್ಲೇ ತಮ್ಮ ಫಾರ್ಮ್‌ಹೌಸ್ ಅನ್ನು ಸರ್ಕಾರಿ ವೆಚ್ಚದಿಂದ ನವೀಕರಿಸಿ ಅವರು ದೇಶಾದ್ಯಂತ ಟೀಕೆಗೆ ಗುರಿಯಾಗಿದ್ದಾರೆ. ಅಂದ ಹಾಗೆ ಫಾರ್ಮ್‌ಹೌಸ್ ನವೀಕರಣಕ್ಕೆ ಜಾಕೊಬ್ ಮಾಡಿದ ವೆಚ್ಚ ಎಷ್ಟು ಗೊತ್ತಾ? ಬರೊಬ್ಬರಿ 138 ಕೋಟಿ!
ಸಂಪೂರ್ಣ ಸರ್ಕಾರಿ ಹಣದಿಂದಲೇ ಫಾರ್ಮ್‌ಹೌಸ್ ಅನ್ನು ನವೀಕರಣ ಮಾಡಿರುವ ಜಾಕೊಬ್ ಇದಕ್ಕೆ ಕೊಟ್ಟ ಕಾರಣ ಏನು ಗೊತ್ತಾ? 1998ರಲ್ಲಿ ಪತ್ನಿ ಮೇಲೆ ನಡೆದ ಅತ್ಯಾಚಾರ. ಹಾಗಾಗಿ ಭದ್ರತೆಯ ದೃಷ್ಟಿಯಿಂದ ಇಷ್ಟೊಂದು ಬದಲಾವಣೆ ಮಾಡಿಕೊಳ್ಳುತ್ತಿದ್ದಾರಂತೆ!
ಆದರೆ, ಜಾಕೊಬ್‌ರಿಗೆ ನಾಲ್ಕು ಪತ್ನಿಯರು. ಹಾಗಾಗಿ ಅವರ ಯಾವ ಪತ್ನಿಯ ಮೇಲೆ ಇಂಥ ಅಪರಾಧ ಎಸಗಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಅಲ್ಲದೆ, ದಕ್ಷಿಣ ಆಫ್ರಿಕಾದಲ್ಲಿ ಅತ್ಯಾಚಾರಕ್ಕೊಳಗಾದವರ ಗುರುತು ಬಹಿರಂಗಪಡಿಸುವುದೂ ಕಾನೂನಿಗೆ ವಿರುದ್ಧ. ಅದೇನೇ ಇದ್ದರೂ ಈ ಫಾರ್ಮ್‌ಹೌಸ್‌ನಲ್ಲಿ ಎಲ್ಲ ರೀತಿಯ ಸಕಲ ಸೌಕರ್ಯಗಳೂ ಇವೆ. ಹೆಲಿಪ್ಯಾಡ್, ಸ್ವಿಮ್ಮಿಂಗ್‌ಪೂಲ್ ಸೇರಿದಂತೆ ಐಷಾರಾಮಿ ಸೌಲಭ್ಯಕ್ಕೆ ಇಲ್ಲಿ ಕೊರತೆ ಇಲ್ಲ.