ಕ.ಪ್ರ. ವಾರ್ತೆ ಬೆಂಗಳೂರು ಮೇ 8
ಬೆಲೆ ಏರಿಕೆ ಪ್ರಸ್ತಾಪ ಮೊದಲೇ ಇದ್ದರೂ ಲೋಕಸಭಾ ಚುನಾವಣೆ ಮೇಲೆ ಪರಿಣಾಮವುಂಟಾಗುತ್ತದೆ ಎಂಬ ಕಾರಣಕ್ಕೆ ಈಗ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಲ್ಲದೇ, ಸರ್ಕಾರದ ಕ್ರಮ ಸಮರ್ಥಿಸಿಕೊಂಡಿದ್ದಾರೆ.
ಬಸ್ ಪ್ರಯಾಣ ದರ ಸೇರಿದಂತೆ ಕೆಲ ಸೇವೆಗಳ ಬೆಲೆ ಏರಿಕೆ ಪ್ರಸ್ತಾಪ ಮೊದಲೇ ಇತ್ತು. ಆದರೆ ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡುವುದು ಬೇಡ ಎಂದು ನಾನೇ ಹೇಳಿದ್ದೆ. ಇದು ಸತ್ಯ. ಈ ರೀತಿ ಸತ್ಯವನ್ನು ಯಾರು ಬಹಿರಂಗವಾಗಿ ಹೇಳುವುದಿಲ್ಲ. ಆದರೆ ನಾನು ಹೇಳುತ್ತಿದ್ದೇನೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಡೀಸೆಲ್ ಬೆಲೆ ಏರಿಕೆ, ಉದ್ಯೋಗಿಗಳ ವೇತನ ಪರಿಷ್ಕರಣೆ ಇತ್ಯಾದಿ ಕಾರಣಗಳಿಂದಾಗಿ ಬಿಎಂಟಿಸಿ ಪ್ರಯಾಣ ದರ ಹೆಚ್ಚಿಸಿದ್ದೇವೆ. ಬಿಎಂಟಿಸಿಯಲ್ಲಿ ಪ್ರತಿ ದಿನಕ್ಕೆ ರು. 1 ಕೋಟಿ ನಷ್ಟವಾಗುತ್ತಿತ್ತು. ಹೀಗಾಗಿ ಸಂಸ್ಥೆ ಲಾಭದಲ್ಲಿ ನಡೆಯುವಂತೆ ಮಾಡಿ ಎಂದು ನಾನೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಬೆಲೆ ಏರಿಕೆ ಕ್ರಮವನ್ನು ಸಮರ್ಥಿಸಿಕೊಂಡರು.
ಇಲ್ಲಷ್ಟೇ ಬೆಲೆ ಏರಿಕೆ ಇಲ್ಲ: ನಾವು ಎಲ್ಲದಕ್ಕೂ ಸಬ್ಸಿಡಿ ಕೊಡ್ತಾ ಹೋದರೆ ಅಭಿವೃದ್ಧಿ ಹೇಗೆ ಸಾಧ್ಯ? ನೀರಾವರಿಗೆ ಪ್ರತಿ ವರ್ಷ ರು. 10000 ಕೋಟಿ ವಿನಿಯೋಗಿಸಬೇಕು. ಅಕ್ಕಿಗೆ ರು. 5000 ಕೋಟಿ ಸಬ್ಸಿಡಿ ಕೊಡ್ತಾ ಇದ್ದೇವೆ. ಜತೆಗೆ ಕೆಲ ಇಲಾಖೆಗಳಲ್ಲಿ ಆಗುತ್ತಿರುವ ನಷ್ಟವನ್ನೂ ಭರಿಸಬೇಕಿದೆ ಎಂದು ಹೇಳಿದರು.
ಬೆಲೆ ಏರಿಕೆ ರಾಷ್ಟ್ರೀಯ ವಿದ್ಯಮಾನ. ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಬೆಲೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವುದಕ್ಕೆ ನಾನು ಅಂಜುತ್ತಿಲ್ಲ. ಆದರೆ ಕೆಲ ಕ್ಷೇತ್ರಗಳಲ್ಲಿ ಬೆಲೆ ಏರಿಕೆ ಅನಿವಾರ್ಯ. ಅದು ನಮ್ಮ ಮಿತಿಯಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟರು.
ಹಾಗಾದರೆ ನಿಮ್ಮ ಸರ್ಕಾರ ಇನ್ನು ಎಷ್ಟು ಸೇವೆಗಳ ಬೆಲೆ ಏರಿಕೆ ಮಾಡುತ್ತದೆ? ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅಕ್ಕಿಯನ್ನು ಬಿಟ್ಟರೆ ಬೇರೆ ಎಲ್ಲ ಸೌಲಭ್ಯಗಳೂ ತುಟ್ಟಿಯೇ? ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ಮಾನ-ಮರ್ಯಾದೆ ಇಲ್ಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ದರ ಹೆಚ್ಚಳ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಲ್ಲ. ಆದಾಗಿಯೂ ನಾನು ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ ಕರೆ ಮಾಡಿದರ ಇಳಿಕೆ ಮಾಡುವಂತೆ ಮನವಿ ಮಾಡಿದ್ದೇನೆ. ಅಷ್ಟಕ್ಕೂ ಟೋಲ್ ಏರಿಕೆ ಪ್ರಸ್ತಾಪಕ್ಕೆ 2010ರಲ್ಲಿ ಬಿಜೆಪಿ ಸರ್ಕಾರವೇ ಸಂಪುಟ ಒಪ್ಪಿಗೆಯನ್ನು ನೀಡಿದೆ. ಈಗ ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಕಿಂಚಿತ್ ಮಾನ-ಮರ್ಯಾದೆ ಇಲ್ಲ ಎಂದು ಕಿಡಿ ಕಾರಿದರು.
ಟೋಲ್ ಇರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರ್ವಿಸ್ ರೋಡ್‌ನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಇದು ಖಾಸಗಿ ಸಹಭಾಗಿತ್ವದ ಯೋಜನೆಗಳಿಗೂ ಅನ್ವಯವಾಗುತ್ತದೆ. ಟೋಲ್‌ನಿಂದ 40 ಕಿಮೀ ವ್ಯಾಪ್ತಿ ಪ್ರದೇಶದ ವರೆಗೆ ಸರ್ವಿಸ್ ರಸ್ತೆ ಇರಬೇಕು. ಜತೆಗೆ ಸುತ್ತಲಿನ ಹಳ್ಳಿಗಳಿಂದ ಬರುವ ಪ್ರತಿ ತಿಂಗಳು 220 ರಿಯಾಯಿತಿ ದರದಲ್ಲಿ ಮಾಸಿಕ ಪಾಸ್ ನೀಡಲು ನಿರ್ಧರಿಸಲಾಗಿದೆ ಎಂದರು.
ಶೋಭಾ ಕರಂದ್ಲಾಜೆ ಬಹಿರಂಗ ಚರ್ಚೆಗೆ ಬರಲಿ
ಬಿಜೆಪಿಯವರ ಕಾಲದಲ್ಲಿ ವಿದ್ಯುತ್ ಉತ್ಪಾದನೆಗೆ ಗಮನವನ್ನೇ ನೀಡಲಿಲ್ಲ. ಇಂಧನ ಇಲಾಖೆಯನ್ನು ಅದ್ವಾನಗೊಳಿಸಿದವರೇ ಅವರು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಅಧಿಕಾರದಲ್ಲಿದ್ದಾಗ ಇಂಧನ ಇಲಾಖೆಯನ್ನು ಹಾಳು ಮಾಡಿದವರೇ ಈಗ ವಿದ್ಯುತ್ ಉತ್ಪಾದನೆ ಬಗ್ಗೆ ಮಾತನಾಡುತ್ತಿದ್ದಾರೆ. ಇಲಾಖೆಯಲ್ಲಿ ರು. 12 ಸಾವಿರ ಕೋಟಿ ಸಾಲ ಮಾಡಿ ಹೋಗಿದ್ದಾರೆ. ನಮ್ಮ ಬಗ್ಗೆ ಆರೋಪ ಮಾಡುವ ಬದಲು ಶೋಭಾ ಕರಂದ್ಲಾಜೆ ಬಹಿರಂಗ ಚರ್ಚೆಗೆ ಬರಲಿ. ನಮ್ಮ ಶಿವಕುಮಾರ್ ತಕ್ಕ ಉತ್ತರ ನೀಡುತ್ತಾರೆ ಎಂದು ಸವಾಲು ಹಾಕಿದ್ದಾರೆ.