ಬಳ್ಳಾರಿ: ಚುನಾವಣೆ ಸಂದರ್ಭದಲ್ಲಿ ರು. 8.57 ಕೋಟಿ ನಗದು, ರು. 38 ಕೋಟಿ ಮೌಲ್ಯದ ಕಿಸಾನ್ ವಿಕಾಸ ಪತ್ರ ಮತ್ತಿತರ ದಾಖಲೆ ವಶಪಡಿಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಬಾಬುಲಾಲ್ ಸೇರಿ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಳ್ಳಾರಿಯ ಎರಡನೇ ಅಪರ ದರ್ಜೆ ನ್ಯಾಯಾಲಯದ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.
ಬಳ್ಳಾರಿ ಗಣೇಶ ಕಾಲನಿಯಲ್ಲಿರುವ ಬಾಬುಲಾಲ್ ಪರಶುರಾಮ ಪುರಿ ಅವರ ಮನೆ ಹಾಗೂ ಬೆಂಗಳೂರು ರಸ್ತೆಯ ಕಚೇರಿ ಮೇಲೆ ಪೊಲೀಸರು, ಚುನಾವಣಾಧಿಕಾರಿಗಳು ದಾಳಿ ಮಾಡಿ ರು. 8.57 ಕೋಟಿ ನಗದು, ರು. 38 ಕೋಟಿ ಮೌಲ್ಯದ ಕಿಸಾನ್ ವಿಕಾಸ ಪತ್ರ, ಕೋಟ್ಯಂತರ ಮೌಲ್ಯದ ಚೆಕ್‌ಗಳು, ನೂರಕ್ಕೂ ಹೆಚ್ಚು ಬ್ಯಾಂಕ್ ಪಾಸ್‌ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಬಾಬುಲಾಲ್ ಪರಶುರಾಮ್ ಪುರಿ, ಅವರ ಸಂಬಂಧಿಗಳಾದ ಶ್ರೀಕಾಂತ್, ರಮೇಶ್ ಹಾಗೂ ವಿಶಾಲ್ ಎಂಬುವರ ಮೇಲೆ ಬಳ್ಳಾರಿ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧನ ಭೀತಿ ಎದುರಿಸುತ್ತಿರುವ ನಾಲ್ವರು ಆರೋಪಿಗಳು ಎರಡನೇ ಅಪರ ದರ್ಜೆ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ವಶಪಡಿಸಿಕೊಂಡ ಹಣದಲ್ಲಿ ಖೋಟಾ ನೋಟು ಪರಿಶೀಲನೆಗೆ ಸಂಬಂಧಿಸಿದಂತೆ ಪೊಲೀಸರು ಆರ್‌ಬಿಐಗೆ ಪತ್ರ ಬರೆದಿದ್ದಾರೆ. ಆರ್‌ಬಿಐ ಅನುಮತಿ ಮೇರೆಗೆ ಖೋಟಾ ನೋಟು ಪತ್ತೆ ಹಚ್ಚುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ. ದಾಳಿಯಲ್ಲಿ ವಶಪಡಿಸಿಕೊಂಡಿರುವ ರು. 38 ಕೋಟಿ ಮೌಲ್ಯದ ಕಿಸಾನ್ ವಿಕಾಸ ಪತ್ರ ನೀಡಲು ಆದಾಯ ತೆರಿಗೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿರುವುದರಿಂದ ಪೊಲೀಸ್ ಇಲಾಖೆ ನ್ಯಾಯಾಲಯದ ಅನುಮತಿಗೆ ಅರ್ಜಿ ಸಲ್ಲಿಸಿದೆ. ಇನ್ನು ಜಾರಿ ನಿರ್ದೇಶನಾಲಯ ಪೊಲೀಸ್ ಇಲಾಖೆಗೆ ಪತ್ರ ಬರೆದು, ಪ್ರಕರಣದ ತನಿಖೆ ಪೂರ್ಣಗೊಳಿಸಿ, ದೋಷಾರೋಪಣ ಪಟ್ಟಿ ಸಲ್ಲಿಸಿದ ಮೇಲೆ ವಶಪಡಿಸಿಕೊಂಡಿರುವ ರು. 8.57 ಕೋಟಿ ನಗದನ್ನು ತನಿಖೆಗೆ ನೀಡುವಂತೆ ತಿಳಿಸಿದೆ.
ತನಿಖೆಗೆ ನಗದು ಹಣವನ್ನು ನೀಡುವಂತೆ ಜಾರಿ ನಿರ್ದೇಶನಾಲದವರು ಪತ್ರ ಬರೆದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಿಸಾನ್ ವಿಕಾಸ್ ಪತ್ರ ನೀಡುವಂತೆ ಕೋರಿದ್ದಾರೆ. ಈ ಕುರಿತಾಗಿ ನ್ಯಾಯಾಲಯದಿಂದ ಅನುಮತಿ ಕೋರಲಾಗಿದೆ. ಬಾಬುಲಾಲ್ ಹಾಗೂ ಇತರ ಮೂವರು ಆರೋಪಿಗಳು ತನಿಖೆಗೆ ಸಹಕರಿಸುತ್ತಿದ್ದಾರೆ.
-ಡಾ. ಚೇತನ್‌ಸಿಂಗ್ ರಾಥೋರ್, ಪೊಲೀಸ್ ವರಿಷ್ಠಾಧಿಕಾರಿ