ಬೆಂಗಳೂರು: ಒಗ್ಗಟ್ಟಿನಲ್ಲಿ ಬಲವಿದೆ... ಮಾತು ಹಳೆಯದಾದರೂ ಶಕ್ತಿ ಮಾತ್ರ ಕುಂದುವುದಿಲ್ಲ. ಸಾಧನೆಗಳು ಅದನ್ನು ದಾಖಲೆಯಾಗಿ ಬರೆಯುತ್ತವೆ. ಅದರಲ್ಲೂ ನರೇಂದ್ರ ಮೋದಿಯಂತಹ ಅಲೆಯೂ ಸೇರಿಕೊಂಡರೆ, ಇಲ್ಲದ ಅಸ್ತಿತ್ವವೂ ಬೃಹದಾಕಾರವಾಗುತ್ತದೆ.
ರಾಜ್ಯದಲ್ಲಿ ಬಿಜೆಪಿಯ ಸಾಧನೆಗೆ ಖಂಡಿತವಾಗಿಯೂ ಫುಲ್ ಮಾರ್ಕ್ಸ್ ನೀಡಬೇಕು. ಕೇವಲ ಒಂದು ವರ್ಷದ ಹಿಂದೆ ಅಸ್ತಿತ್ವವೇ ಕಳೆದುಕೊಂಡಂತಹ ಪಕ್ಷವಾಗಿ ಸೋಲಿನ ಮುಳ್ಳುಹಾಸಿಗೆಯಲ್ಲಿ ಮಲಗುವ ಹೀನಾಯ ಪರಿಸ್ಥಿತಿ ಇತ್ತು. ಇದನ್ನು ಮೆಟ್ಟಿ ನಿಂತು, ಎಲ್ಲರೂ ಒಗ್ಗೂಡಿದರೆ ಗೆಲವಿನ ಮಂತ್ರ ಜಪಿಸಬಹುದೆಂಬ ದಿಟ್ಟ ನಿರ್ಧಾರ ಇಂದು ವಿಜಯಮಾಲೆ ಧರಿಸುವಂತೆ ಮಾಡಿದೆ. ಈ ನಿರ್ಧಾರಕ್ಕೆ 'ನಮೋ ಅಲೆ'ಯೇ ಕಾರಣವಾಗಿದ್ದು, ಸುನಾಮಿಯಾಗಿ ಪಕ್ಷಕ್ಕೆ ಬಲ ತಂದುಕೊಟ್ಟಿದೆ.
2008ರಲ್ಲಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ, ಕಳೆದ ವಿಧಾನಸಭೆ ಚುನಾವಣೆ ವೇಳೆಗೆ ಹರಿದು ಹಂಚಿಹೋಗಿತ್ತು. ನಾಯಕರ ಪ್ರತಿಷ್ಠೆ, ಒಳಜಗಳ, ಗೊಂದಲಗಳಿಂದ ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಎಂದು ಮೂರು ಭಾಗವಾಗಿಹೋಗಿತ್ತು. ವಿಧಾನಸಭೆ ಚುನಾವಣೆಯ ಫಲಿತಾಂಶ ಈ ಮೂರೂ ಭಾಗಗಳಿಗೆ ಪಾಠ ಕಲಿಸಿತ್ತು. ಇದನ್ನು ಸೂಕ್ಷ್ಮವಾಗಿಯೇ ಮೂರು ಭಾಗದವರು ಅರಿತುಕೊಂಡಿದ್ದರು. ಆದರೆ ಒಳಸೇರಿಕೊಳ್ಳಲು ವೇದಿಕೆಯೊಂದರ ಅಗತ್ಯವಿತ್ತು. ಅದನ್ನು ಸೃಷ್ಟಿಸಿದ್ದೇ ನರೇಂದ್ರ ಮೋದಿ ಅಲೆ. ಇದನ್ನು ಸೂಕ್ತವಾಗಿ ಬಳಸಿಕೊಂಡ ಮೂರು ಭಾಗಗಳು ಒಂದಾಗಿ ಚುನಾವಣೆ ಎದುರಿಸುವ, ನಮೋಗೆ ಶಕ್ತಿ ನೀಡಲು ನಿರ್ಧರಿಸಿದವು.
ಹೀಗಾಗಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮೆಲ್ಲೇ ಪ್ರತಿಷ್ಠೆಗಳನ್ನು ಬಿಟ್ಟು ಬಿಜೆಪಿಗೆ ಮರಳಿದರು. ಇವರನ್ನು ಕರೆತರಲು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ರಾಷ್ಟ್ರೀಯ ನಾಯಕ ಅನಂತಕುಮಾರ್ ನಿರಂತರ ಪ್ರಯತ್ನ ಮಾಡಿದರು. ಇದರ ಫಲ ಬಿಜೆಪಿಗೆ ಬಿಎಸ್‌ವೈ ಪ್ರವೇಶ ಷರತ್ತುರಹಿತವಾಗಿ ಆಯಿತು. ಲೋಕಸಭೆ ಚುನಾವಣೆ ವೇಳೆಗೆ ಬಳ್ಳಾರಿ ಭಾಗದ ಪ್ರಮುಖ ಶಕ್ತಿ ಎಂದೇ ಗುರುತಿಸಲಾಗಿರುವ ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು ಅವರನ್ನು ಬಿಜೆಪಿ ಹಿರಿಯ ವರಿಷ್ಠರ ವಿರೋಧದ ನಡುವೆಯೂ ಕರೆತಂದಿತು. ಶಾಸಕ ಸ್ಥಾನಕ್ಕೇ ರಾಜಿನಾಮೆ ನೀಡಿ ಶ್ರೀರಾಮುಲು ಅವರು ನಮೋಗಾಗಿ ಬಿಜೆಪಿ ಸೇರಿಕೊಂಡರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದೇವೆ. ಅವರು ಇನ್ನೆಂದು ಮೇಲೇಳಲಾರರು ಎಂಬ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಕೇಕೆಯ ಮಾತುಗಳಿಗೆ ಲೋಕಸಭೆಯ ಫಲಿತಾಂಶ ದಿಟ್ಟ ಉತ್ತರವನ್ನೇ ನೀಡಿದೆ.
ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ. ಚಿತ್ರದುರ್ಗದಲ್ಲಿ ಜನಾರ್ದನಸ್ವಾಮಿ ಅವರಿಗೆ ಹಿನ್ನಡೆ ಖಚಿತ ಎಂಬ ಮಾಹಿತಿ ಇದ್ದರೂ ಬಿಜೆಪಿ ಅವರಿಗೇ ಟಿಕೆಟ್ ನೀಡಿತು. ತುಮಕೂರಿನಲ್ಲಿ ಜಿ.ಎಸ್. ಬಸವರಾಜು ಸೋಲು ಖಚಿತ ಎಂಬ ವಿಷಯ ಎಲ್ಲರಿಗೂ ಅರಿವಿದ್ದರೂ ಬಿಎಸ್‌ವೈ ಒತ್ತಡ ಮೇಲೆ ಅವರಿಗೇ ಟಿಕೆಟ್ ಲಭ್ಯವಾಯಿತು. ಇದು ಮತ್ತೊಂದು ಸ್ಥಾನ ಬಿಜೆಪಿಯಿಂದ ಕೈತಪ್ಪಿತು. ಇಂತಹ ಕೆಲವು ತಪ್ಪುಗಳಿಂದಲೇ ಬಿಜೆಪಿ ನಾಯಕರು ಹೇಳುತ್ತಿದ್ದ 20 ಸಂಖ್ಯೆಯನ್ನು ತಲುಪಲು ಸಾಧ್ಯವಾಗಿಲ್ಲ.
-ಕೆರೆ ಮಂಜುನಾಥ್