ರಾಜ್ಯ

ಮೋದಿ ಬಿರುಗಾಳಿಗೆ ಸಿಲುಕಿದ ಸಿದ್ದು ಕುರ್ಚಿ

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲೂ ಬೀಸಿದ ಮೋದಿ ಅಲೆ ರಾಜ್ಯದ ಮುಖ್ಯಮಂತ್ರಿ...

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲೂ ಬೀಸಿದ ಮೋದಿ ಅಲೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ತೀವ್ರವಾಗಿ ತಟ್ಟಿದ್ದು, ತೀವ್ರ ಮುಖಭಂಗ ಎದುರಿಸುವಂತಾಗಿದೆ. ಇದು ಸಿದ್ದರಾಮಯ್ಯ ಅವರಿಗಾದ ತೀವ್ರ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಲ್ಲಿ ಎಚ್. ವಿಶ್ವನಾಥ್ ಸೋತಿರುವುದು ಮುಖ್ಯಮಂತ್ರಿಗಳ ಪಾಲಿಗೆ ನುಂಗಲಾರದ ತುತ್ತು. ಈ ಗಾಯದ ಮೇಲೆ ಬರೆ ಎಳೆಯುವಂತೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ತವರು ಜಿಲ್ಲೆಯಾದ ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ. ಲೋಕಸಭೆ ಫಲಿತಾಂಶ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಕೈ ಬಲಪಡಿಸಿದರೆ, ಮುಖ್ಯಮಂತ್ರಿಯನ್ನು ತಳಮಳಕ್ಕೀಡು ಮಾಡಿದೆ.
ಲೋಕಸಭೆ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಒಂದಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸುವುದು ಗ್ಯಾರಂಟಿ. ಈಗಾಗಲೇ ಆಸ್ಸಾಂ ಮುಖ್ಯಮಂತ್ರಿ ರಾಜೀನಾಮೆ ಸಲ್ಲಿಸುವುದಾಗಿ ಹೇಳಿರುವುದು ಮತ್ತು ಮಹಾರಾಷ್ಟ್ರ ಕೈಗಾರಿಕಾ ಸಚಿವರು ರಾಜಿನಾಮೆ ಸಲ್ಲಿಸಿರುವುದು ಮತ್ತು ಮುಂದೆ ನಡೆಯಲಿರುವ ಇನ್ನಷ್ಟು ರಾಜಿನಾಮೆಗಳು ಮುಖ್ಯಮಂತ್ರಿ ಮತ್ತು ಕೆಲವು ಸಚಿವರ ಮೇಲೆ ರಾಜಿನಾಮೆ ಒತ್ತಡ ಹೆಚ್ಚಿಸುವ ಲಕ್ಷಣ ಗೋಚರಿಸುತ್ತಿದೆ.
ಇದರ ಜತೆಗೆ ಇನ್ನೊಂದು ಸಮೀಕರಣದಿಂದಲೂ ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣ ರಾಜ್ಯದಲ್ಲಿ ವಿಫಲವಾಗಿದೆ ಎಂದು ವಾಖ್ಯಾನ ಮಾಡಲಾಗುತ್ತಿದೆ. ಅಹಿಂದ ಮತಗಳು ಕಾಂಗ್ರೆಸ್‌ಗೆ ಬಂದಿದ್ದರೆ ಇದಕ್ಕಿಂತ ಹೆಚ್ಚು ಸೀಟುಗಳು ಬರುತ್ತಿದ್ದವು ಎಂದು ಪಕ್ಷದವರೇ ವಾದಿಸುತ್ತಿದ್ದಾರೆ. ಇದರ ಜತೆಗೆ  ಅಹಿಂದ ಆಧಾರದಲ್ಲಿ ಟಿಕೆಟ್ ಪಡೆದಿದ್ದ ಕೊಪ್ಪಳ ಮತ್ತು ಮೈಸೂರು ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ. ಕುರುಬರು ಹೆಚ್ಚು ಸಂಖ್ಯೆಯಲ್ಲಿರುವ ಕೊಪ್ಪಳ ಕ್ಷೇತ್ರದಲ್ಲಿ ಸೋತಿರುವುದು ಕೂಡ ಸಿದ್ದರಾಮಯ್ಯ ಅವರಿಗೆ ಹಿನ್ನೆಡೆಯೇ. ಆದರೆ ಪರಿಶಿಷ್ಟ ಜಾತಿಯ ನಾಲ್ವರು, ಪರಿಶಿಷ್ಟ ಪಂಗಡದ ಒಬ್ಬರು ಗೆದ್ದಿದ್ದಾರೆ. ಹಿಂದುಳಿದ ವರ್ಗದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದು ವೀರಪ್ಪ ಮೊಯ್ಲಿ ಮಾತ್ರ. ಇದು ಜಿ. ಪರಮೇಶ್ವರ, ಖರ್ಗೆ ಅವರ ಪಾಲಿಗೆ ಉತ್ತಮ ಬೆಳವಣಿಗೆ.
ಸರ್ಕಾರದಲ್ಲಿ ಐವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಸಚಿವರಿದ್ದಾರೆ. ಆದರೆ ರಾಜ್ಯಾದ್ಯಂತ ಒಬ್ಬರೇ ಒಬ್ಬರು ಅಲ್ಪಸಂಖ್ಯಾತರು ಕಾಂಗ್ರೆಸ್‌ನಿಂದ ಗೆಲ್ಲಲು ಸಾಧ್ಯವಾಗಿಲ್ಲ.
ಕೆಲವು ಸಚಿವರು ಸ್ಥಾನ ಕಳೆದುಕೊಂಡರೆ, ಇನ್ನಷ್ಟು ಸಚಿವರ ಖಾತೆ ಬದಲಾವಣೆ ಆಗಬಹುದು. ಅದರ ಜತೆಗೆ ಮುಖ್ಯಮಂತ್ರಿ ಕುರ್ಚಿಯೇ ಅಲುಗಾಡುವ ಮುನ್ಸೂಚನೆಗಳು ಲಭಿಸಲಾರಂಭಿಸಿವೆ. ರಾಜ್ಯದಲ್ಲಿ ಸರ್ಕಾರ ಬಂದು 1 ವರ್ಷವಷ್ಟೇ ಆಗಿರುವುದರಿಂದ ಇದು ಸರ್ಕಾರದ ಕುರಿತು ಜನತೆಯ ತೀರ್ಪು ಆಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರೂ, ಪ್ರತಿಪಕ್ಷಗಳು ಮತ್ತು ಪಕ್ಷದೊಳಗಿನ ವಿರೋಧಿಗಳು ಸರ್ಕಾರದ ಬಗ್ಗೆ ಜನರ ತೀರ್ಪು ಎಂದೇ ಬಿಂಬಿಸಲು ಯತ್ನಿಸುತ್ತಾರೆ.
ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಅನ್ನ ಭಾಗ್ಯ ಸೇರಿದಂತೆ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದರು. ಅವು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶವನ್ನೇ ಮುಂದಿಟ್ಟುಕೊಂಡು ಪಕ್ಷದೊಳಗಿನ ವಿರೋಧಿಗಳು ಹಾಗೂ ವಿರೋಧ ಪಕ್ಷಗಳು ಮುಖ್ಯಮಂತ್ರಿಗಳ ಕಾಲೆಳೆಯಲು ಪ್ರಯತ್ನಿಸಲಿವೆ. ಅದರ ಜತೆಗೆ ಈಗ ಪ್ರಕಾಶ ಹುಕ್ಕೇರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕೆಲವು ಜಿಲ್ಲಾ ಉಸ್ತುವಾರಿ ಸಚಿವರ ವ್ಯಾಪ್ತಿಯಲ್ಲಿ ಸೀಟುಗಳನ್ನು ಸೋತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವರು ಸಚಿವರ ತಲೆದಂಡ ಕೂಡ ಆಗಲಿದೆ ಎನ್ನಲಾಗುತ್ತಿದೆ.
ಸೋಲಿನ ಜತೆಗೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಕ್ಕರಿಸಿಕೊಂಡರೆ ರಾಜ್ಯದಲ್ಲಿ ಭಾರೀ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳಲಿವೆ. ಇದೇ ಅವಕಾಶ ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವೂ ನಡೆಯಲಿದೆ.
ಇದನ್ನು ನಿಭಾಯಿಸುವ ಜತೆಗೆ, ಸಚಿವ ಸಂಪುಟ ವಿಸ್ತರಣೆ, ವಿಧಾನಪರಿಷತ್ ಚುನಾವಣೆ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕದಂತಹ ಜೇನುಗೂಡಿಗೆ ಕೈ ಹಾಕುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಬೇಕಿದೆ. ಅಂತಹ ಸವಾಲನ್ನು ಸಿದ್ದರಾಮಯ್ಯ ಹೇಗೆ ಎದುರಿಸುತ್ತಾರೆ ಎಂಬುದು ಸದ್ಯದ ಕುತೂಹಲ.
ದೇಶಾದ್ಯಂತ ಕಾಂಗ್ರೆಸ್ ಅತ್ಯಂತ ಕಡಿಮೆ ಸೀಟುಗಳನ್ನು ಗೆದ್ದಿರುವ ಪ್ರತಿಕೂಲ ಪರಿಸ್ಥಿತಿಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ 9 ಸೀಟುಗಳನ್ನು ಗೆದ್ದಿರುವುದು ದೊಡ್ಡ ಸಾಧನೆ ಎಂದು ಹೇಳುವುದೊಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿರುವ ಸಮಾಧಾನದ ಅಂಶ.
ಅದೊಂದೇ ಅವರಿಗಿರುವ ಸಮರ್ಥನೆ ಕೂಡ. ಅದೊಂದು ಬಿಟ್ಟರೆ ಲೋಕಸಭೆ ಫಲಿತಾಂಶ ಸಿದ್ದರಾಮಯ್ಯ ಅವರಿಗೆ ಮತ್ತೆಲ್ಲವೂ ಪ್ರತಿಕೂಲ ಅಂಶಗಳೇ.
ಸಿಎಂ ಸಿದ್ದು ಸೋತರು
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆಯಲ್ಲೇ ತೀವ್ರ ಮುಖಭಂಗವಾಗಿದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಎಚ್. ವಿಶ್ವನಾಥ್ ಸೋತಿರುವುದು ಅವರ ಸಾಮರ್ಥ್ಯವನ್ನು ಈಗ ಪ್ರಶ್ನಿಸುವಂತೆ ಮಾಡಿದೆ.
ಹಿಂದಿನ ಜನತಾ ಪರಿವಾರದಿಂದ ಹಿಡಿದು ಈಗಿನ ಕಾಂಗ್ರೆಸ್‌ನವರೆಗೆ ಸಿದ್ದರಾಮಯ್ಯ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಪ್ರಶ್ನಾತೀತ ನಾಯಕ. 10 ವರ್ಷಗಳಿಂದ ಈ ಭಾಗದಲ್ಲಿ ನಡೆದಿರುವ ಎಲ್ಲ ಚುನಾವಣೆಗಳಲ್ಲೂ ಅವರ ನಾಯಕತ್ವಕ್ಕೆ ಜೈಕಾರ ಸಿಕ್ಕಿದೆ. ಆದರೆ ಈ ಬಾರಿಯ ಫಲಿತಾಂಶ ಉಲ್ಟಾ ಹೊಡೆದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಐವರು ಶಾಸಕರು, ಇಬ್ಬರು ಸಚಿವರಿದ್ದಾರೆ. ಇಷ್ಟಾಗಿ ಹಿಂದುಳಿದ ಕುರುಬ ಜನಾಂಗಕ್ಕೆ ಸೇರಿದ ವಿಶ್ವನಾಥ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಒಕ್ಕಲಿಗರಾಗಿದ್ದಾರೆ. ಆದರೆ ಕಾಂಗ್ರೆಸ್ ಒಂದು ಪ್ರಬಲ ವರ್ಗದ ವಿರೋಧ, ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದೆ.
ಪರಮೇಶ್ವರ ಗೆದ್ದರು
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದ್ದಷ್ಟೆ ಅಲ್ಲ, ಕೆಪಿಸಿಸಿ ಅಧ್ಯಕ್ಷರೂ ಕೂಡ ಗೆದ್ದಂತೆ!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸ್ವತಃ ತಾವು ಸೋತು, ಎರಡು ಕಡೆ ಕಾಂಗ್ರೆಸ್ ಠೇವಣಿ ಕೂಡ ಕಳೆದುಕೊಳ್ಳುವಷ್ಟರ ಮಟ್ಟಿಗೆ ದಯನೀಯ ಸ್ಥಿತಿ ತಲುಪಿತ್ತು. ಅಲ್ಲದೇ ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಹೊಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಪರಮೇಶ್ವರ್‌ಗೆ ನೀಡಿತ್ತು. ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ ಮೂಲ ಕಾಂಗ್ರೆಸಿಗರಾಗಿದ್ದ, ಜೆಡಿಎಸ್‌ನಲ್ಲಿದ್ದ ಮುದ್ದಹನುಮೇಗೌಡರನ್ನು ಪಕ್ಷಕ್ಕೆ ಕರೆತಂದ ಪರಮೇಶ್ವರ್ ಟಿಕೆಟ್ ನೀಡಿದ್ದರು. ಹೀಗಾಗಿ ಒಂದರ್ಥದಲ್ಲಿ ಪರಮೇಶ್ವರ್ ಗೆದ್ದಂತೆ.
ತಾವೇ ಹೊಣೆಗಾರಿಕೆ: ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಿದ ಸಂದರ್ಭದಲ್ಲಿ ಪರಮೇಶ್ವರ್ ಈ ಕ್ಷೇತ್ರದ ಫಲಿತಾಂಶದ ಹೊಣೆಯನ್ನು ತಾವೇ ಹೊರುವುದಾಗಿ ಹೇಳಿದ್ದರು.

-ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo ಅವಾಂತರ ತಹಬದಿಗೆ: ಅಡಚಣೆ ಪ್ರಮಾಣ ಇಳಿಕೆ; 'ಹಂತಹಂತವಾಗಿ ಮರಳುತ್ತಿದ್ದೇವೆ' ಎಂದ CEO

LeT ಜೊತೆಗೆ ಒಪ್ಪಂದ; ಹಮಾಸ್ 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿ; ಭಾರತಕ್ಕೆ ಇಸ್ರೇಲ್ ಒತ್ತಾಯ!

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ: 'ತಿಥಿ' ಹೀರೋಗೆ ಇಂದೆಂಥಾ ಸ್ಥಿತಿ?, ಅಭಿ ಈಗ ದಿನಗೂಲಿ ಕಾರ್ಮಿಕ!

ಮದುವೆ ರದ್ದು ಬೆನ್ನಲ್ಲೇ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡ ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್!

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

SCROLL FOR NEXT