ಬೆಂಗಳೂರು: ರಾಜ್ಯದಲ್ಲಿ ಜಾತ್ಯತೀತ ಜನತಾದಳದ ಬಲ, ಅರ್ಹತೆ ಮತ್ತೊಮ್ಮೆ ಸಾಬೀತಾಗಿದೆ. ಬೇರೆಯೊಬ್ಬರ ಗೆಲವು-ಸೋಲಿಗೆ ತಮ್ಮ ಅಭ್ಯರ್ಥಿಯನ್ನೇ ಪಣಕ್ಕಿಡುವ ಚಾಳಿ ಇನ್ನೊಮ್ಮೆ ಮುಂದುವರಿದಿದೆ. ಇದಕ್ಕೆ ತಕ್ಕ ಬೆಲೆಯನ್ನು ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ತೆತ್ತಿದೆ.
ಜೆಡಿಎಸ್ ಇನ್ನೆಷ್ಟು ಪಾಠ ಕಲಿಯಬೇಕು ಅಥವಾ ಜನ ಕಲಿಸಬೇಕು ಎಂಬುದು ಇನ್ನೂ ನಿಗೂಢ ಪ್ರಶ್ನೆಯೇ ಆಗಿದೆ. ಪ್ರತಿ ಚುನಾವಣೆಯಲ್ಲೂ 'ಅನುಕೂಲಕರ' ಅಭ್ಯರ್ಥಿಗಾಗಿಯೇ ಹುಡುಕಾಟ ನಡೆಸುವ ಜೆಡಿಎಸ್, ಇನ್ನೊಂದು ಪಕ್ಷದಿಂದ ಬರುವವರಿಗೇ ಕಾಯುತ್ತಿರುತ್ತದೆ. ಇಂತಹ ಪರಿಸ್ಥಿತಿ ಕಳೆದ ವಿಧಾನಸಭೆಯಲ್ಲೂ ನಡೆದು, ಲೋಕಸಭೆಯಲ್ಲೂ ಮುಂದುವರಿಸಿತು. ಅದಕ್ಕೇ, ಜೆಡಿಎಸ್ ಸಾಮರ್ಥ್ಯ ಸಾಬೀತಾಗಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಹೀನಾಯ ಸೋಲು ಜೆಡಿಎಸ್‌ಗೆ ಇರುವ ಜನಬೆಂಬಲ ಪ್ರತಿಬಿಂಬ. ಮಾಜಿ ಪ್ರಧಾನಿ ದೇವೇಗೌಡರ ದೂರದೃಷ್ಟಿ ಹಾಗೂ ರಾಜಕೀಯ ಅನುಭವಕ್ಕೆ ಬೆಲೆ ನೀಡದೆ ಎಚ್‌ಡಿಕೆ ತಮ್ಮದೇ ಸ್ವಾರ್ಥ ಸಾಧನೆಗೆ ಮುಂದಾಗಿ ಜೆಡಿಎಸ್‌ನ್ನೇ ಚುನಾವಣೆಗಳಲ್ಲಿ ಪಣವಾಗಿಡುತ್ತಾರೆ. ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ದೇವೇಗೌಡರಿಗೆ ವಿರುದ್ಧವಾಗಿಯೇ ದಾಳಹಾಕುತ್ತಾರೆ. ಇದರ ಪರಿಣಾಮವೇ ಜೆಡಿಎಸ್ ರಾಜ್ಯದಲ್ಲಿ ಹೀನಾಯಸ್ಥಿತಿಗೆ ಬಂದು ನಿಂತಿದೆ.
ರಾಜ್ಯದಲ್ಲಿ ಜೆಡಿಎಸ್ ಗೆದ್ದಿರುವುದು ಎರಡು ಕ್ಷೇತ್ರದಲ್ಲಿ. ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಗೆಲವಿನ ಓಟಕ್ಕೆ ಯಾರೂ ಅಂಕುಶ ಹಾಕಲು ಸಾಧ್ಯವಿಲ್ಲ ಎಂಬ ನಿರೀಕ್ಷೆ ಅಧಿಕೃತವಾಗಿದೆ. ಇನ್ನು ಮಂಡ್ಯದಲ್ಲಿ ತೀವ್ರ ಪೈಪೋಟಿ ಹಾಗೂ ಕಾಂಗ್ರೆಸ್ ಒಳಜಗಳ ಜೆಡಿಎಸ್‌ನ ಪುಟ್ಟರಾಜುಗೆ ಅನುಕೂಲ ಕಲ್ಪಿಸಿದೆ. ಇದನ್ನು ಬಿಟ್ಟರೆ ಕುಮಾರಸ್ವಾಮಿಯೂ ಸೋತಿದ್ದಾರೆ. ಸೋಲುವುದಿರಲಿ, ಮೂರನೇ ಸ್ಥಾನಕ್ಕೆ ಹೋಗಿ ಭಾರಿ ಮುಖಭಂಗ ಅನುಭವಿಸಿದ್ದಾರೆ. ಅಷ್ಟೇ ಅಲ್ಲ, ಗೆದ್ದ 2 ಕ್ಷೇತ್ರ ಬಿಟ್ಟರೆ ಕೋಲಾರದಲ್ಲಿ ಮಾತ್ರ ಜೆಡಿಎಸ್‌ಗೆ ಎರಡನೇ ಸ್ಥಾನ. ಉಳಿದ ಕಡೆ ನಾಮಕೆವಾಸ್ತೆ. ಈ ಮುಖಭಂಗಕ್ಕೆ ಎಚ್‌ಡಿಕೆಯೇ ನೇರ ಹೊಣೆ.
ಈ ಚುನಾವಣೆಗೆ ನಿಲ್ಲುವುದೇ ಇಲ್ಲ. ಕುಟುಂಬದವರು ನಿಲ್ಲೋದೇ ಇಲ್ಲ ಎನ್ನುತ್ತಾರೆ ಒಂದು ಬಾರಿ. ಇನ್ನೊಮ್ಮೆ ಇಲ್ಲ ಕಾರ್ಯಕರ್ತರು ಬಯಸಿದ್ದಾರೆ, ಪತ್ನಿಯನ್ನು ನಿಲ್ಲಿಸುತ್ತೇನೆ ಎನ್ನುತ್ತಾರೆ. ನಂತರ ಅವರು ನಿಲ್ಲಲ್ಲ ನಾನು ನಿಲ್ಲುತ್ತೇನೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಉತ್ತರ ಕರ್ನಾಟಕದಲ್ಲಿ ಯಾವುದಾದರೂ ಕ್ಷೇತ್ರ... ಹೀಗೆ ಕುಮಾರಸ್ವಾಮಿಯವರ ಹೇಳಿಕೆ ಮೂರ್ನಾಲ್ಕು ಕ್ಷೇತ್ರದ ಕಾರ್ಯಕರ್ತರನ್ನು ಅಂತಿಮ ಕ್ಷಣದವರೆಗೂ ಗೊಂದಲದಲ್ಲೇ ಮುಳುಗಿಸಿತು. ಕೊನೆಗೆ ಬೆಂಗಳೂರು ಗ್ರಾಮಾಂತರದಲ್ಲಿ ನಿಲ್ಲಲು ಹೆದರಿ, ಚಿಕ್ಕಬಳ್ಳಾಪುರಕ್ಕೆ ಹೋದರು. ಅಲ್ಲೂ ಗೆಲ್ಲುವ ಹೋರಾಟ ಮಾಡಲಿಲ್ಲ.
ಬದಲಿಗೆ ಕಾಂಗ್ರೆಸ್ ಗೆಲವಿಗೆ ಪ್ರಮುಖ ಪಾತ್ರ ವಹಿಸಿದರು. ನಾಯಕ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕು, ಭರವಸೆ ತುಂಬಬೇಕು. ಆದರೆ ಎಚ್‌ಡಿಕೆ ತಾವೇ ಒಂದು ಕ್ಷೇತ್ರದ ಅಭ್ಯರ್ಥಿಯಾಗಿ ಬೇರೆ ಅಭ್ಯರ್ಥಿಗಳನ್ನು ಮರೆತರು. ಇದೆಲ್ಲ ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿಸುವ ಜತೆಗೆ ಬೇರೆಪಕ್ಷದೊಂದಿಗೆ ಸೇರಿ ಕೆಲಸ ಮಾಡುವಂತೆ ಮಾಡಿತು. ಇದೆಲ್ಲದರ ಫಲವೇ ಈ ದುಸ್ಥಿತಿ. ಇನ್ನೊಂದು ಪಕ್ಷದಿಂದ ಬರುವವರಿಗೇ ಮಣೆ ಅಥವಾ ನಾನು ಗೆದ್ದು ತೋರಿಸುತ್ತೇನೆ ಎನ್ನುವವರಿಗೆ ಆದ್ಯತೆ. ಇದಕ್ಕೆ ಮಧುಬಂಗಾರಪ್ಪ ಸ್ಪಷ್ಟ ಉದಾಹರಣೆ. ಉತ್ತರ ಕನ್ನಡ, ಶಿವಮೊಗ್ಗ ನನ್ನದು ಎಂದ ಕೂಡಲೇ ಯಾರು ಅಭ್ಯರ್ಥಿ ಎಂದು ಗೊತ್ತಿಲ್ಲದಿದ್ದರೂ ಎರಡೆರಡು ಹೆಸರು ಪ್ರಕಟವಾಯಿತು.
ಶಿವಮೊಗ್ಗದಲ್ಲಿ ಗೆದ್ದೆ ಬಿಟ್ಟೆವು ಎಂಬ ಮಾತನಾಡಿದ್ದರು ಎಚ್‌ಡಿಕೆ. ಆದರೆ ಪತ್ನಿಗೆ ಮಾತ್ರ ಪ್ರಚಾರ, ಜೆಡಿಎಸ್‌ಗಲ್ಲ ಎಂದು ಶಿವರಾಜ್‌ಕುಮಾರ್ ಹೇಳಿಯೇಬಿಟ್ಟರು. ಅವರಿಗಾಗಿ ಪ್ರಚಾರ ಮಾಡಲು ಬಂದ ಚಿತ್ರನಟರೂ ಹೇಳಿದ್ದು ಇದನ್ನೇ. ಕುಟುಂಬ ಜಗಳಕ್ಕೆ ಕುಮ್ಮಕ್ಕು ನೀಡಿದರೆಂಬ ಕೆಟ್ಟಹೆಸರು ಬಂದಿತು. ಇಂತಹ ತಪ್ಪುಗಳಿಗೆ ಜೆಡಿಎಸ್ ಭಾರೀ ಬೆಲೆ ತೆರಬೇಕಾಗಿದೆ. ಹೀಗಾಗಿ, ಜೆಡಿಎಸ್‌ಗೆ ಮತ್ತೊಮ್ಮೆ ಆತ್ಮವಿಮರ್ಶೆಯ ಕಾಲ. ಈಗಲೂ ಸೂಕ್ತ ಹೆಜ್ಜೆ ಇಡದಿದ್ದರೆ ಜೆಡಿಎಸ್ ಮುಂದಿನ ಚುನಾವಣೆ ವೇಳೆಗೆ ಅಧೋಗತಿ ತಲುಪುತ್ತದೆ.
-ಕೆರೆ ಮಂಜುನಾಥ್