ಮೈಸೂರು: ಫಲಿತಾಂಶ ಬರುವವರೆಗೂ ರಾಜಕೀಯ ಮಾಡಿದ್ದಾಗಿದೆ. ಇಂದಿನಿಂದ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನಹರಿಸಿ ಮೈಸೂರು- ಕೊಡಗು ಜಿಲ್ಲೆಗಳನ್ನು ಉತ್ತುಂಗಕ್ಕೆ ಕೊಂಡೊಯ್ಯೋಣ ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು.
ಮೈಸೂರು ಕ್ಷೇತ್ರದಿಂದ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, 'ರಾಜಕೀಯಕ್ಕೆ ಹೊಸಬನಾಗಿ ಬಂದ ದಿನ ಶುಕ್ರವಾರವಾಗಿತ್ತು. ಅಂದು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದೆ. ಅದೇ ರೀತಿ ಶುಕ್ರವಾರದಂದೇ ನನ್ನ ಪರ ಫಲಿತಾಂಶ ಬಂದಿದೆ. ನನ್ನ ಗೆಲವಿಗೆ ಸಹಕರಿಸಿದ ಮೈಸೂರು - ಕೊಡಗಿನ ಜನತೆ, ಹಿತೈಷಿಗಳಿಗೆ ಮನಃಪೂರ್ವಕವಾಗಿ ವಂದಿಸುತ್ತೇನೆ. ಗೆಲವಿನಿಂದ ನನ್ನ ಮೇಲಿನ ಜವಾಬ್ದಾರಿ ಹೆಚ್ಚಿದೆ' ಎಂದರು.
'ಅಭ್ಯರ್ಥಿಯಾಗಿ ನನ್ನ ಹೆಸರು ಪ್ರಕಟವಾದಾಗಿನಿಂದ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದವರಿಗೆ ವಂದಿಸುತ್ತೇನೆ. ಇಡೀ ರಾಜ್ಯಾದ್ಯಂತ ಇರುವ ನನ್ನ ಓದುಗರು ಕರೆ ಮಾಡಿ ತಮ್ಮ ಸಂಬಂಧಿಕರಿಗೆ ಹೇಳಿ ಮತ ಹಾಕಿಸಿದ್ದಾರೆ. ಅದರಲ್ಲೂ ನಮೋ ಬ್ರಿಗೇಡ್ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಿದ್ದಾರೆ. ಇದರ ಜೊತೆಗೆ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಬಿ. ಶ್ರೀರಾಮುಲು, ಅನಂತಕುಮಾರ್ ಪ್ರಚಾರ ನಡೆಸಿ ಆತ್ಮಸ್ಥೈರ್ಯ ತುಂಬಿದರು' ಎಂದು ಅವರು ಸ್ಮರಿಸಿದರು.