ಬೆಳಗಿನ ಉಪಾಹಾರಕ್ಕೆ ಆರೋಗ್ಯಕರ, ಪ್ರೋಟೀನ್‌ಭರಿತ ಮತ್ತು ರುಚಿಕರವಾದ ತಿನಿಸು ಬೇಕೆಂದರೆ ಕ್ಯಾಲಿಫೋರ್ನಿಯ ವೈಟ್ ಆಮ್ಲೆಟ್ ಉತ್ತಮ ಆಯ್ಕೆ. ಮೊಟ್ಟೆಯ ಬಿಳಿಭಾಗ, ತಾಜಾ ತರಕಾರಿಗಳು ಮತ್ತು ಚೀಸ್ ಬಳಸಿ ತಯಾರಿಸುವ ಈ ಆಮ್ಲೆಟ್ ಕಡಿಮೆ ಕ್ಯಾಲೊರಿಯುಳ್ಳದ್ದಾಗಿದ್ದು, ಫಿಟ್ನೆಸ್ ಪ್ರಿಯರ ನೆಚ್ಚಿನ ಉಪಾಹಾರಗಳಲ್ಲಿ ಒಂದಾಗಿದೆ.
ಬೇಕಾಗುವ ಪದಾರ್ಥಗಳು...
ಮೊಟ್ಟೆಯ ಬಿಳಿಭಾಗ – 4
ಈರುಳ್ಳಿ – 1 ಸಣ್ಣದು (ಸಣ್ಣದಾಗಿ ಕತ್ತರಿಸಿದ್ದು)
ಕ್ಯಾಪ್ಸಿಕಂ – ¼ ಬಟ್ಟಲು (ಸಣ್ಣದಾಗಿ ಕತ್ತರಿಸಿದ್ದು)
ಪಾಲಕ್ ಸೊಪ್ಪು – ½ ಬಟ್ಟಲು (ಸಣ್ಣದಾಗಿ ಹೆಚ್ಚಿದ್ದು)
ಮಶ್ರೂಮ್ – ¼ ಬಟ್ಟಲು (ಐಚ್ಛಿಕ)
ಮೊಝರೆಲ್ಲಾ ಅಥವಾ ಚೆಡಾರ್ ಚೀಸ್ – 2 ಚಮಚ
ಆಲಿವ್ ಎಣ್ಣೆ ಅಥವಾ ಬೆಣ್ಣೆ – 1 ಚಮಚ
ಕಾಳು ಮೆಣಸಿನ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
ಒಂದು ಪಾತ್ರೆಯಲ್ಲಿ ಮೊಟ್ಟೆಯ ಬಿಳಿಭಾಗವನ್ನು ಹಾಕಿ, ಚೆನ್ನಾಗಿ ಕಲೆಸಿ. ಅದಕ್ಕೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ.
ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಎಣ್ಣೆ ಅಥವಾ ಬೆಣ್ಣೆ ಬಿಸಿ ಮಾಡಿ.
ಈರುಳ್ಳಿ, ಕ್ಯಾಪ್ಸಿಕಂ ಮತ್ತು ಮಶ್ರೂಮ್ ಹಾಕಿ 2–3 ನಿಮಿಷ ಹುರಿಯಿರಿ.
ಬಳಿಕ ಪಾಲಕ್ ಸೊಪ್ಪು ಸೇರಿಸಿ ಸ್ವಲ್ಪ ಮೃದುವಾಗುವವರೆಗೆ ಬೇಯಿಸಿ.
ಈಗ ಬೇರೊಂದು ಬಾಣಲೆಯಲ್ಲಿ 1/2 ಚಮಚ ಎಣ್ಣೆಯನ್ನು ಹಾಕಿ ಕಡಿಮೆ ಶಾಖದಲ್ಲಿ ಕಾಯಿಸಿ. ಅದಕ್ಕೆ ಒಂದು ಕಪ್ ಮೊಟ್ಟೆಯ ಬಿಳಿ ಲೋಳೆಯನ್ನು ಸುರಿಯಬೇಕು.
ಮೊಟ್ಟೆ ಬೇಯಲು ಆರಂಭವಾದ ಬಳಿಕ ಅದರ ಬದಿಯನ್ನು ಮೆಲ್ಲಗೆ ಮೇಲೆತ್ತಿ ಆಗ ಮೊಟ್ಟೆಯ ಬಿಳಿಭಾಗ ಸರಿಯಾಗಿ ಸೆಟ್ ಆಗುತ್ತದೆ.
ಆಮ್ಲೆಟ್ ಇನ್ನೂ ತೇವಭರಿತವಾಗಿರುವಾಗಲೇ ಪಾಲಕ್, ಈರುಳ್ಳಿ, ಕ್ಯಾಪ್ಸಿಕಂ, ಮತ್ತು ಅಣಬೆಗಳನ್ನು ಅದರ ಮೇಲೆ ಉದುರಿಸಿ. ಆನಂತರ ಚೀಸ್ ಅನ್ನು ಹಾಕಿ, ಆಮ್ಲೆಟ್ಟನ್ನು ಮಡಚಿ. ಈಗ ಕ್ಯಾಲಿಫೋರ್ನಿಯ ವೈಟ್ ಆಮ್ಲೆಟ್ ಸವಿಯಲು ಸಿದ್ಧ.
ಟಿಪ್ಸ್...
ಇನ್ನಷ್ಟು ಆರೋಗ್ಯಕರವಾಗಿರಲು ಕತ್ತರಿಸಿದ ಅವಕಾಡೊ (ಬೆಣ್ಣೆಹಣ್ಣು)ಗಳನ್ನು ಸೇರಿಸಬಹುದು.
ಟೋಸ್ಟ್ ಬ್ರೆಡ್ ಅಥವಾ ಸಲಾಡ್ ಜೊತೆಗೆ ಸವಿದರೆ ರುಚಿ ಹೆಚ್ಚುತ್ತದೆ.
ಹೆಚ್ಚಿನ ಪ್ರೋಟೀನ್‌ಗಾಗಿ ಗ್ರಿಲ್ ಮಾಡಿದ ಚಿಕನ್ ತುಂಡುಗಳನ್ನು ಸೇರಿಸಬಹುದು.