ಬಜ್ಜಿ, ಬೋಂಡಾ ತಿಂದು ಬೇಸರವಾಗಿದೆಯಾ? ಹೊಸ ರುಚಿಯ ಶಾವಿಗೆ ಪಕೋಡಾ ಮಾಡಿ ನೋಡಿ...

ಸಂಜೆಯ ಹೊತ್ತಿನಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿ ಜೊತೆ ಗರಿಗರಿಯಾದ ತಿಂಡಿ ಸವಿಯಬೇಕೆನಿಸುವುದು ಸಹಜ. ಪ್ರತಿದಿನ ಮಾಡುವ ಬಜ್ಜಿ, ಬೋಂಡಾಗಳಿಗಿಂತ ಸ್ವಲ್ಪ ವಿಭಿನ್ನವಾದ ರುಚಿ ಬೇಕೆಂದರೆ ಶಾವಿಗೆ ಪಕೋಡಾ ಒಮ್ಮೆ ಟ್ರೈ ಮಾಡಿ.
semiya pakoda
ಶಾವಿಗೆ ಪಕೋಡಾ
Updated on: 

ಸಂಜೆಯ ಹೊತ್ತಿನಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿ ಜೊತೆ ಗರಿಗರಿಯಾದ ತಿಂಡಿ ಸವಿಯಬೇಕೆನಿಸುವುದು ಸಹಜ. ಪ್ರತಿದಿನ ಮಾಡುವ ಬಜ್ಜಿ, ಬೋಂಡಾಗಳಿಗಿಂತ ಸ್ವಲ್ಪ ವಿಭಿನ್ನವಾದ ರುಚಿ ಬೇಕೆಂದರೆ ಶಾವಿಗೆ ಪಕೋಡಾ ಒಮ್ಮೆ ಟ್ರೈ ಮಾಡಿ.

ಮನೆಯಲ್ಲಿ ಸುಲಭವಾಗಿ ಸಿಗುವ ಶಾವಿಗೆ, ಈರುಳ್ಳಿ, ಕಡಲೆಹಿಟ್ಟು ಮತ್ತು ಕೆಲವು ಮಸಾಲೆ ಪದಾರ್ಥಗಳನ್ನು ಬಳಸಿ ಕಡಿಮೆ ಸಮಯದಲ್ಲೇ ಈ ರುಚಿಕರವಾದ ತಿಂಡಿಯನ್ನು ತಯಾರಿಸಬಹುದು. ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುವ ಶಾವಿಗೆ ಪಕೋಡಾವನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಹಾಗಾದರೆ, ಈ ಟೇಸ್ಟಿ ಪಕೋಡಾ ಮಾಡುವ ಸುಲಭ ವಿಧಾನ ಇಲ್ಲಿದೆ...

ಬೇಕಾಗುವ ಪದಾರ್ಥಗಳು...

  • ಶಾವಿಗೆ – 1 ಬಟ್ಟಲು

  • ಈರುಳ್ಳಿ – 2 (ಸಣ್ಣಗೆ ಹೆಚ್ಚಿದ್ದು)

  • ಅಕ್ಕಿಹಿಟ್ಟು – 3 ಚಮಚ

  • ಕಡಲೆಹಿಟ್ಟು – 3 ಚಮಚ

  • ಹಸಿಮೆಣಸಿನಕಾಯಿ – 2 (ಸಣ್ಣಗೆ ಹೆಚ್ಚಿದ್ದು)

  • ಶುಂಠಿ – 1 ಚಮಚ(ಸಣ್ಣಗೆ ಹೆಚ್ಚಿದ್ದು)

  • ಕರಿಬೇವು – ಸ್ವಲ್ಪ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ಜೀರಿಗೆ – ಅರ್ಧ ಚಮಚ

  • ಅಚ್ಚ ಖಾರದಪುಡಿ– ಅರ್ಧ ಚಮಚ (ರುಚಿಗೆ ತಕ್ಕಂತೆ)

  • ಅರಿಶಿನ – ಚಿಟಿಕೆ

  • ಉಪ್ಪು – ರುಚಿಗೆ ತಕ್ಕಷ್ಟು

  • ನೀರು – ಅಗತ್ಯಕ್ಕೆ ತಕ್ಕಷ್ಟು

  • ಎಣ್ಣೆ – ಕರಿಯಲು

semiya pakoda
ಮೀನು ಖಾದ್ಯಕ್ಕೆ ಹೊಸ ಟೇಸ್ಟ್ ಬೇಕಾ? ಒಮ್ಮೆ ಮಾಡಿ ನೋಡಿ ತಂದೂರಿ ಪಾಂಫ್ರೆಟ್..!

ಮಾಡುವ ವಿಧಾನ...

  • ಮೊದಲು ಒಂದು ಪಾತ್ರೆಯಲ್ಲಿ ನೀರು ಕುದಿಸಿ, ಶಾವಿಗೆಯನ್ನು ಹಾಕಿ ಮೃದುವಾಗುವವರೆಗೆ ಬೇಯಿಸಿ. ನಂತರ ನೀರನ್ನು ಸಂಪೂರ್ಣವಾಗಿ ಬಸಿದು ಶಾವಿಗೆಯನ್ನು ತಣ್ಣಗಾಗಲು ಬಿಡಿ. ಶಾವಿಗೆ ಅತಿಯಾಗಿ ಮೆತ್ತಗಾಗದಂತೆ ನೋಡಿಕೊಳ್ಳಿ.

  • ಒಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿದ ಶಾವಿಗೆ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ.

  • ಇದಕ್ಕೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಜೀರಿಗೆ, ಅಚ್ಚ ಖಾರದ ಪುಡಿ, ಅರಿಶಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣ ಒಣಗಿದ್ದರೆ ಸ್ವಲ್ಪ ನೀರು ಚಿಮುಕಿಸಿ. ಹೆಚ್ಚು ನೀರು ಸೇರಿಸಬೇಡಿ.

  • ಮಿಶ್ರಣವನ್ನು ಕೈಯಲ್ಲಿ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಸಣ್ಣ ಉಂಡೆಗಳಂತೆ ಅಥವಾ ಸಡಿಲವಾದ ಪಕೋಡಾ ಆಕಾರದಲ್ಲಿ ತಯಾರಿಸಿಕೊಳ್ಳಿ.

  • ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಪಕೋಡಾಗಳನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ. ಮಧ್ಯಮ ಉರಿಯಲ್ಲಿ ತಿರುಗಿಸುತ್ತಾ ಚಿನ್ನದ ಬಣ್ಣ ಬರುವವರೆಗೆ ಗರಿಗರಿಯಾಗಿ ಕರಿಯಿರಿ. ನಂತರ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಇಡಿ.

ರುಚಿ ಹೆಚ್ಚಿಸಲು ಕೆಲವು ಟಿಪ್ಸ್'ಗಳು...

  • ಪಕೋಡಾ ಹೆಚ್ಚು ಗರಿಗರಿಯಾಗಲು ಅಕ್ಕಿಹಿಟ್ಟನ್ನು ಸೇರಿಸುವುದು ಮುಖ್ಯ.

  • ಈರುಳ್ಳಿಯಲ್ಲಿರುವ ತೇವಾಂಶ ಸಾಕಾಗದಿದ್ದರೆ ಮಾತ್ರ ಸ್ವಲ್ಪ ನೀರು ಸೇರಿಸಿ.

  • ಎಣ್ಣೆ ತುಂಬಾ ತಣ್ಣಗಿದ್ದರೆ ಪಕೋಡಾ ಹೆಚ್ಚು ಎಣ್ಣೆ ಹೀರಿಕೊಳ್ಳಬಹುದು.

  • ಖಾರ ಇಷ್ಟವಿದ್ದರೆ ಮೆಣಸಿನಪುಡಿ ಅಥವಾ ಹಸಿಮೆಣಸಿನಕಾಯಿ ಪ್ರಮಾಣ ಹೆಚ್ಚಿಸಬಹುದು.

  • ಬಿಸಿಬಿಸಿಯಾದ ಶಾವಿಗೆ ಪಕೋಡಾವನ್ನು ತೆಂಗಿನಕಾಯಿ ಚಟ್ನಿ, ಟೊಮೆಟೊ ಸಾಸ್ ಅಥವಾ ಬಿಸಿ ಚಹಾದೊಂದಿಗೆ ಸವಿಯಿರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com