ಅಡುಗೆ

ಪ್ರೋಟೀನ್‌ಯುಕ್ತ ಸೋಯಾಬೀನ್‌ನಿಂದ ಮಾಡಿ ರುಚಿಕರ ಕುರ್ಮಾ; ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ..!

ಪ್ರತಿದಿನ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದ್ದರೆ ಒಮ್ಮೆ ಸೋಯಾಬೀನ್ ಕುರ್ಮಾ ತಯಾರಿಸಿ ನೋಡಿ. ಪ್ರೋಟೀನ್‌ಯುಕ್ತ ಸೋಯಾ ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಿಸುವ ಈ ಕುರ್ಮಾ ರುಚಿಯಲ್ಲೂ ವಿಭಿನ್ನವಾಗಿರುತ್ತದೆ.

ಪ್ರೋಟೀನ್‌ಯುಕ್ತ ಸೋಯಾಬೀನ್‌ನಿಂದ ಮಾಡಿ ರುಚಿಕರ ಕುರ್ಮಾ; ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ..!
ಸೋಯಾಬೀನ್ ಕುರ್ಮಾ
Published On :

ಪ್ರತಿದಿನ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದ್ದರೆ ಒಮ್ಮೆ ಸೋಯಾಬೀನ್ ಕುರ್ಮಾ ತಯಾರಿಸಿ ನೋಡಿ. ಪ್ರೋಟೀನ್‌ಯುಕ್ತ ಸೋಯಾ ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಿಸುವ ಈ ಕುರ್ಮಾ ರುಚಿಯಲ್ಲೂ ವಿಭಿನ್ನವಾಗಿರುತ್ತದೆ. ಚಪಾತಿ, ರೊಟ್ಟಿ, ಪೂರಿ, ದೋಸೆ ಹಾಗೂ ಅನ್ನದ ಜೊತೆ ಸವಿಯಲು ಇದು ಉತ್ತಮ ಆಯ್ಕೆ. ಮನೆಯಲ್ಲಿರುವ ಸಾಮಾನ್ಯ ಸಾಮಗ್ರಿಗಳನ್ನೇ ಬಳಸಿ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು...

  • ಸೋಯಾಬೀನ್ – 1 ಬಟ್ಟಲು

  • ಈರುಳ್ಳಿ – 2

  • ಟೊಮೆಟೊ – 2

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಹಸಿಮೆಣಸಿನಕಾಯಿ – 2

  • ತೆಂಗಿನ ತುರಿ – ½ ಬಟ್ಟಲು

  • ಗೋಡಂಬಿ – 8 ರಿಂದ 10

  • ಗಸಗಸೆ – 1 ಚಮಚ

  • ಮೊಸರು – 2 ಚಮಚ

  • ಅರಿಶಿನ ಪುಡಿ – ¼ ಚಮಚ

  • ಮೆಣಸಿನ ಪುಡಿ – 1 ಚಮಚ

  • ಧನಿಯಾ ಪುಡಿ – 1 ಚಮಚ

  • ಗರಂ ಮಸಾಲೆ – ½ ಚಮಚ

  • ಜೀರಿಗೆ – ½ ಚಮಚ

  • ಚಕ್ಕೆ, ಲವಂಗ – ಸ್ವಲ್ಪ

  • ಕರಿಬೇವು – ಸ್ವಲ್ಪ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ಎಣ್ಣೆ – 2 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲು ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಸೋಯಾಬೀನ್ ತುಂಡುಗಳನ್ನು ಹಾಕಿ 5–7 ನಿಮಿಷ ಬೇಯಿಸಿಕೊಳ್ಳಿ. ನಂತರ ನೀರನ್ನು ಬಸಿದು ತಣ್ಣೀರಿನಲ್ಲಿ ತೊಳೆದು ಚೆನ್ನಾಗಿ ಹಿಂಡಿ ಪಕ್ಕಕ್ಕಿಡಿ. ಇದರಿಂದ ಸೋಯಾಬೀನ್‌ನ ವಾಸನೆ ಕಡಿಮೆಯಾಗುತ್ತದೆ.

  • ಮಿಕ್ಸಿ ಜಾರ್'ಗೆ ತೆಂಗಿನ ತುರಿ, ಗೋಡಂಬಿ ಮತ್ತು ಗಸಗಸೆಯನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪ ಹುರಿದ ಈರುಳ್ಳಿಯನ್ನೂ ಸೇರಿಸಬಹುದು.

  • ಇದೀಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಚಕ್ಕೆ, ಲವಂಗ ಮತ್ತು ಕರಿಬೇವು ಹಾಕಿ ಒಗ್ಗರಣೆ ನೀಡಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

  • ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಬಳಿಕ ಹೆಚ್ಚಿದ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ.

  • ಇದಕ್ಕೆ ಅರಿಶಿನ ಪುಡಿ, ಮೆಣಸಿನ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

  • ಈಗ ಬೇಯಿಸಿ ಹಿಂಡಿಟ್ಟ ಸೋಯಾಬೀನ್ ತುಂಡುಗಳನ್ನು ಹಾಕಿ ಮಸಾಲೆಯೊಂದಿಗೆ ಚೆನ್ನಾಗಿ ಕಲಸಿ. 2–3 ನಿಮಿಷ ಹುರಿಯಿರಿ.

  • ನಂತರ ರುಬ್ಬಿಟ್ಟ ತೆಂಗಿನಕಾಯಿ ಮಿಶ್ರಣವನ್ನು ಸೇರಿಸಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುರ್ಮಾದ ಹದಕ್ಕೆ ಹೊಂದಿಸಿಕೊಳ್ಳಿ.

  • ಕಡಿಮೆ ಉರಿಯಲ್ಲಿ 8–10 ನಿಮಿಷ ಕುದಿಯಲು ಬಿಡಿ. ಕೊನೆಯಲ್ಲಿ ಮೊಸರು ಸೇರಿಸಿ ಚೆನ್ನಾಗಿ ಕಲಸಿ ಒಂದು ನಿಮಿಷ ಬಿಸಿ ಮಾಡಿ. ಮೊಸರು ಸೇರಿಸುವಾಗ ಉರಿ ಕಡಿಮೆ ಇರಲಿ.

  • ಕೊತ್ತಂಬರಿ ಸೊಪ್ಪು ಉದುರಿಸಿ ಒಲೆಯಿಂದ ಇಳಿಸಿ. ಇದೀಗ ರುಚಿಕರವಾದ ಸೋಯಾಬೀನ್ ಕುರ್ಮಾ ಸವಿಯಲು ಸಿದ್ಧ.

ಟಿಪ್ಸ್...

  • ಸೋಯಾಬೀನ್ ತುಂಡುಗಳನ್ನು ಕುದಿಸಿದ ನಂತರ ಚೆನ್ನಾಗಿ ಹಿಂಡುವುದರಿಂದ ಅವುಗಳಲ್ಲಿರುವ ಹೆಚ್ಚುವರಿ ನೀರು ಮತ್ತು ವಾಸನೆ ಕಡಿಮೆಯಾಗುತ್ತದೆ.

  • ಕುರ್ಮಾ ಗಟ್ಟಿಯಾಗಿರಬೇಕೆಂದರೆ ತೆಂಗಿನಕಾಯಿ ಮತ್ತು ಗೋಡಂಬಿಯ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಬಹುದು.

  • ಹೋಟೆಲ್ ಶೈಲಿಯ ರುಚಿಗಾಗಿ ಸ್ವಲ್ಪ ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ರುಬ್ಬುವ ಮಸಾಲೆಗೆ ಸೇರಿಸಬಹುದು.

  • ಹೆಚ್ಚು ಖಾರ ಇಷ್ಟವಿಲ್ಲದಿದ್ದರೆ ಮೆಣಸಿನ ಪುಡಿಯ ಪ್ರಮಾಣ ಕಡಿಮೆ ಮಾಡಿ.

  • ಬಿಸಿಬಿಸಿಯಾದ ಚಪಾತಿ, ರೊಟ್ಟಿ ಅಥವಾ ತುಪ್ಪದ ಅನ್ನದ ಜೊತೆ ಈ ಸೋಯಾಬೀನ್ ಕುರ್ಮಾ ಸವಿದರೆ ಅದರ ರುಚಿಯೇ ಬೇರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.