ಮೂಳೆಗಳು ಅಸಹಜವಾಗಿ ದುರ್ಬಲಗೊಂಡಿರುವ ಆಸ್ಟಿಯೋಪೋರೋಸಿಸ್ ಅಥವಾ ಅಸ್ಥಿರಂಧ್ರತೆ ಸಮಸ್ಯೆ ಹೊಂದಿರುವವರು ಪದೇ ಪದೆ ಮೂಳೆ ಮುರಿತದ ತೊಂದರೆಗೆ ಸಿಲುಕಬಹುದು.
ದೇಹದಲ್ಲಿರುವ ಮೂಳೆ ಗ್ರಂಥಿಗಳ ಸಂಪೂರ್ಣ ಅಥವಾ ಅರೆ ಪ್ರಮಾಣದಲ್ಲಿ ಮುರಿದರೆ ಮೂಳೆ ಮುರಿತ ಎನ್ನುತ್ತಾರೆ. ದೇಹಕ್ಕೆ ಸಹಾಯಕ್ಕೆ ಬಾರದ ಈ ಮೂಳೆ ಗಾಯಕ್ಕೆ ಪ್ಲಾಸ್ಟರ್ ಅಚ್ಚು ಕಟ್ಟುವ ಮೂಲಕ ಚಿಕಿತ್ಸೆ ನೀಡಬಹುದು. ಕೆಲವು ಗಂಭೀರ ಪ್ರಕರಣಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ಅಗತ್ಯ. ಕಳೆದ 30 ವರ್ಷಗಳಲ್ಲಿ ಮೂಳೆ ಮುರಿತದ ಪ್ರಮಾಣ ಮೂರುಪಟ್ಟು ಹೆಚ್ಚಾಗಿದ್ದು, ಭಾರತವೇ ಮುಂಚೂಣಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 4.4 ಲಕ್ಷ ಜನರು ಮೂಳೆಮುರಿತ ಅನುಭವಿಸುತ್ತಾರೆ. ಮೂಳೆಗಳು ಅಸಹಜವಾಗಿ ದುರ್ಬಲಗೊಂಡಿರುವ ಆಸ್ಟಿಯೋಪೋರೋಸಿಸ್ ಅಥವಾ ಅಸ್ಥಿರಂಧ್ರತೆ ಸಮಸ್ಯೆ ಹೊಂದಿರುವವರು ಪದೇ ಪದೆ ಮೂಳೆ ಮುರಿತದ ತೊಂದರೆಗೆ ಸಿಲುಕಬಹುದು.
ಪರಿಹಾರವುಂಟು
ಗಾಯವಾದ ಮೊದಲ 48 ಗಂಟೆಗಳ ಅವಧಿ ಬಹಳ ಮುಖ್ಯ. ವಿಶ್ರಾಂತಿ, ಐಸ್ ಬ್ಯಾಂಡೇಜ್, ಗಾಯಗೊಂಡ ಜಾಗದ ಮುತುವರ್ಜಿ ಹಾಗೂ ವೈದ್ಯರ ಸಲಹೆ ಒಳಗೊಂಡ ಪ್ರಥಮ ಚಿಕಿತ್ಸೆ ರೋಗಿಯ ಗಾಯ ಗಂಭೀರವಾಗದಂತೆ ತಡೆಯಬಲ್ಲದು. ಮುರಿದ ಮೂಳೆಗಳೂ ಮರು ಜೋಡಣೆಗೊಂಡು ಮೊದಲಿನಂತಾಗಲು ಗಾಯದ ಸ್ವರೂಪ ಅವಲಂಬಿಸಿ ಕೆಲವು ವಾರಗಳಿಂದ 2 ತಿಂಗಳು ಬೇಕಾಗಬಹುದು.
ಆರೋಗ್ಯ ಸೂತ್ರ
ಮರುಜೋಡಣೆಗೆ ಹೆಚ್ಚುವರಿ ಪೌಷ್ಟಿಕ ಆಹಾರಗಳು ಅಗತ್ಯ. ದೇಹಕ್ಕೆ ಹೆಚ್ಚು ಕ್ಯಾಲ್ಸಿಯಂ ಪೂರೈಸುವ ಹಾಲು, ಚೀಸ್, ಮೊಸರು, ತರಕಾರಿ ಮತ್ತು ಶೆಲ್ ಫಿಶ್ ಸೇವಿಸಿ.
ಧೂಮಪಾನ ಮಾಡಿದರೆ ಮೂಳೆಗಳಿಗೆ ರಕ್ತ ಪರಿಚಲನೆ ವ್ಯತ್ಯಯವಾಗಿ, ಗುಣವಾಗಲು ಹೆಚ್ಚು ಸಮಯ ಹಿಡಿಯುತ್ತದೆ. ಅಲ್ಲದೇ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಗಾಯದ ಸುತ್ತವಿರುವ ಮೂಳೆ, ಚರ್ಮ ಹಾಗೂ ಇತರೆ ಮೃದು ಗ್ರಂಥಿಗಳು ಚೇತರಿಸಿಕೊಳ್ಳುವುದು ಕಷ್ಟ. ಮದ್ಯಪಾನ ನಿಯಂತ್ರಿಸಿ. ಮದ್ಯ ಹೊಸ ಮೂಳೆ ಕಣಗಳ ಸಂರಚನೆ ವಿಳಂಬವಾಗುವಂತೆ ಮಾಡುತ್ತದೆ ಮತ್ತು ದೇಹದ ಸಂಕೇತಗಳಿಗೆ ಸ್ಪಂದಿಸುವ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಕಾಫಿ, ಕೋಲಾ ಮತ್ತಿತರ ಕೆಫೇನ್ಯುಕ್ತ ದ್ರವಪದಾರ್ಥಗಳನ್ನು ವರ್ಜಿಸಿ. ಇವು ಮೂತ್ರದಲ್ಲಿ ಹೆಚ್ಚು ಕ್ಯಾಲ್ಸಿಯಂ ಹೋಗುವಂತೆ ಮಾಡುತ್ತದೆ. ವ್ಯಾಯಾಮ ಬೇಕು. ಆದರೆ, ಅತಿಯಾಗಿ ಬೇಡ.
ಹದ್ಜೋಡ್ ಎಂಬ ಔಷಧಿ
ಹಿಂದಿ ಪದ ಹದ್ಜೋಡ್ನ ಅರ್ಥ ಮುರಿದ ಮೂಳೆಗಳನ್ನು ಒಂದು ಮಾಡುವುದು ಎಂದು. ಸಂಸ್ಕೃತದಲ್ಲಿ ಇದನ್ನು ಅಸ್ಥಿಸಂಹಾರಕ ಎನ್ನುತ್ತಾರೆ. ಹಾನಿಗೊಂಡ ಮೂಳೆಗಳ ಸಂರಕ್ಷಣೆ ಎಂಬುದು ಇದರರ್ಥ. ಭಾರತದಲ್ಲಿ ಯಥೇಚ್ಛವಾಗಿ ಕಾಣಬರುವ ಹದ್ಜೋಡ್ ಚಿಕಿತ್ಸೆ, ಮೂಳೆ ಮುರಿತಕ್ಕೆ ಆಯುರ್ವೇದೀಯ ಚಿಕಿತ್ಸಾ ವಿಧಾನದಲ್ಲಿ ಮಹತ್ವದ ಪಾತ್ರ ಹೊಂದಿದೆ. ಹದ್ಜೋಡ್ನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಇತರೆ ಅಂಶಗಳಿದ್ದು, ಇವುಗಳು ಮುರಿದ ಮೂಳೆಗಳ ಸುತ್ತಮುತ್ತ ಸಂಪರ್ಕ ಗ್ರಂಥಿಗಳು ಬೇಗನೆ ಮರುಚೈತನ್ಯ ಪಡೆಯುವಂತೆ ಪ್ರಭಾವ ಬೀರುತ್ತವೆ. ಈ ಗಿಡಮೂಲಿಕೆ ಮೂಳೆ ರಚನೆಯ ಸಹಜ ಪ್ರಕ್ರಿಯೆ ಬೇಗ ಆಗುವಂತೆ ನೋಡಿಕೊಳ್ಳುತ್ತದೆ ಮತ್ತು ಕ್ಷಿಪ್ರ ಅವಧಿಯಲ್ಲಿ ಗಾಯ ಮಾಗಲು ಸಹಕರಿಸುತ್ತದೆ. ಹದ್ಜೋಡ್ ಮೂಳೆಗಳ ಬೆಳವಣಿಗೆಗೆ ಪೂರಕವಾಗಿ ಮೂಳೆಗಳ ಶಕ್ತಿ ಹೆಚ್ಚಿಸುತ್ತದೆ. ಮೂಳೆಗಳ ಖನಿಜಾಂಶ ನಷ್ಟವಾಗದಂತೆ ತಡೆಗಟ್ಟುವ ಮೂಲಕ ಅಸ್ಥಿರಂಧ್ರತೆ ತಡೆಗಟ್ಟುತ್ತದೆ. ಕ್ಯಾಲ್ಸಿಯಂ, ಫಾಸ್ಪರಸ್, ಸಲ್ಫರ್ ಮತ್ತು ಸ್ಟ್ರೋನ್ಷಿಯಂನಂಥ ಪೌಷ್ಟಿಕಾಂಶಗಳ ಸೇವನೆ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತದೆ. ನೋವು ನಿವಾರಕವೂ ಆಗಿರುವ ಇದು ಮೂಳೆ ಸಂಬಂಧಿಸಿದ ನೋವುಗಳಿಂದ ಮುಕ್ತಗೊಳಿಸುತ್ತದೆ.
ಹದ್ಜೋಡ್ ವಿಶೇಷವೇನು?
ಮೂಳೆಮುರಿತ ಗುಣಪಡಿಸುವ ಸಾಮರ್ಥ್ಯ ಹೊಂದಿದೆ.
ನೈಸರ್ಗಿಕ ಕ್ಯಾಲ್ಸಿಯಂ ಅಂಶ ಹೊಂದಿದೆ.
ಮೂಳೆಗಳ ಶಕ್ತಿ ಹೆಚ್ಚಿಸುತ್ತದೆ.
ಗಾಯದಿಂದ ಉದ್ಭವಿಸುವ ನೋವು ಶಮನಗೊಳಿಸುತ್ತದೆ.
ಹೊಸ ಮೂಳೆಗಳ ಶಕ್ತಿ ವರ್ಧಿಸುತ್ತದೆ.
-ಡಾ. ರಂಗೇಶ್ ಪರಮೇಶ್