'ಬಡವರ ಸೇಬು' ಎಂದೇ ಪ್ರಸಿದ್ಧವಾಗಿರುವ ಟೊಮೇಟೊವನ್ನು ಇಂದಿಗೂ ಹಣ್ಣುಹಂಪಲುಗಳ ಜಾತಿಗೆ ಸೇರಿಸಬೇಕೋ? ತರಕಾರಿಗಳ ಜಾತಿಗೆ ಸೇರಿಸಬೇಕೋ ಎನ್ನುವ ಅಂತ್ಯವಿಲ್ಲದ ಚರ್ಚೆ ಮುಂದುವರಿಯುತ್ತಿದೆ. ಆದರೆ, ಟೊಮೇಟೊ ಮಾತ್ರ ಇದಾವುದರ ಪರಿವೆ ಇಲ್ಲದೆ ತನ್ನನ್ನು ತಿಂದವರಿಗೆ ಬೇಕಾದಷ್ಟು ವಿಟಮಿನ್ ಕೊಡುತ್ತಲೇ ಇದೆ ಎಂಬುದು ಮಾತ್ರ ಸತ್ಯ. ದೇಹಕ್ಕೆ ಶಕ್ತಿವರ್ಧಕವಾಗಿರುವ ಟೊಮೇಟೊ ಯಥೇಚ್ಛ ವಿಟಮಿನ್ 'ಸಿ' ಒದಗಿಸಲು ಸಹಕಾರಿ. ಜೊತೆಗೆ ಉತ್ತಮ ಆರೋಗ್ಯಕ್ಕೆ ಅವಶ್ಯವಾಗಿರುವ ಮೆಗ್ನೀಷಿಯಂ, ರಂಜಕ, ತಾಮ್ರದ ಅಂಶಗಳನ್ನೂ ನೀಡುತ್ತದೆ. ಹೀಗಾಗಿಯೇ ಟೊಮೇಟೊವನ್ನು ಇಡಿಯಾಗಿ ಇಲ್ಲವೇ ವಿವಿಧ ಪದಾರ್ಥಗಳ ಮೂಲಕ ಆಗಾಗ ತಿನ್ನುತ್ತಿರಬೇಕು. ಈ ನಿಟ್ಟಿನಲ್ಲಿ ಟೊಮೇಟೊ ಆರೋಗ್ಯ ವೃದ್ಧಿಗೆ ಹೇಗೆ ಸಹಕಾರಿ ಎಂಬುದನ್ನು ಐದು ಅಂಶಗಳಿಂದ ತಿಳಿದುಕೊಳ್ಳೋಣ.
ಟೊಮೇಟೊ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಇಳಿಸುವುದರೊಂದಿಗೆ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ರಾಮಬಾಣ. ರಕ್ತ ಶುದ್ಧಿ ಅಲ್ಲದೆ, ಶುಗರ್ ಅನ್ನೂ ನಿಯಂತ್ರಿಸುತ್ತದೆ.
ಮುಖ್ಯವಾಗಿ ಮಹಿಳೆಯರಿಗೆ ಖುಷಿಯಾಗುವ ವಿಷಯವೆಂದರೆ ಇದು ಸುಂದರ ತ್ವಚೆಗೆ ಮತ್ತು ನುಣುಪು ಕೂದಲಿಗೆ ಸಹಕಾರಿ. ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುವ ಟೊಮೇಟೊವನ್ನು ತಿನ್ನುವುದರಿಂದ ಸಣ್ಣ ವಯೋವಾನದಲ್ಲೇ ವೃದ್ಧರಂತೆ ಕಾಣುವುದನ್ನು ತಡೆಯಬಹುದು.
ಉತ್ತಮ ಜೀವಸತ್ವ ಹೊಂದಿರುವ ಟೊಮೇಟೊ ಜೀವಿಯ ಮೂಲವಾದ ಡಿಎನ್ಎಯನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ದೃಷಿ ಸುಧಾರಣೆಗೂ ಸಹಕಾರಿ.
ದೇಹಕ್ಕೆ ಅಗತ್ಯವಾದ ವಿಟಮಿನ್ 'ಕೆ'ಯನ್ನು ಒದಗಿಸಿ, ಮೊಳೆಗಳನ್ನು ಗಟ್ಟಿಗೊಳಿಸುತ್ತದೆ. ಮಾತ್ರವಲ್ಲದೆ ಮೂಳೆ ಸವೆತ ತಡೆಗಟ್ಟುತ್ತದೆ.
ಟೊಮೇಟೊದಲ್ಲಿರುವ ಲಿಕೋಪಿನ್ ಅಂಶ ಕ್ಯಾನ್ಸರ್ ತಡೆಗೆ ಸ್ವಾಭಾವಿಕವಾದ ದಿವ್ಯೌಷಧಯಾಗಿದೆ. ಗಂಟಲು, ಹೊಟ್ಟೆ, ಗುದನಾಳದ ಕ್ಯಾನ್ಸರ್ ತಡೆಗಟ್ಟಲು ಟೊಮೇಟೊ ಅತಿ ಸಹಕಾರಿಯಾಗಿದೆ.
- ಸುಧೀಂದ್ರ ಜಮ್ಮಟಿಗೆ