ಬದುಕಿನ ಗುಟ್ಟುಗಳನ್ನು ಕಡಲೆಕಾಯಿಯನ್ನು ಬಿಡಿಸಿದಂತೆ ಬಿಡಿಸಬಹುದು. ಹಾಗೆಯೇ ಅದನ್ನು ಅಷ್ಟೇ ಸರಳವಾಗಿ ನುಂಗಲೂಬಹುದು. ಖಂಡಿತಾ ಅದು ಜೀರ್ಣವಾಗುತ್ತದೆ. ಬದುಕಿನ ರಹಸ್ಯ ಬಗೆಯುವುದು ಕಠಿಣವಲ್ಲವೇ ಅಲ್ಲ. ಬೇಕಾದರೆ ನೀವೇ ನೋಡಿ...
ನೀವಾರೆಂಬುದನ್ನು ಕಂಡುಕೊಳ್ಳಿ.
ಯಾರೂ ನನ್ನ ಅರ್ಥ ಮಾಡಿಕೊಂಡಿಲ್ಲವೆಂದು ದೂರುತ್ತೇವೆ. ಆದರೆ, ನಮ್ಮನ್ನು ನಾವೇ ಅರ್ಥ ಮಾಡಿಕೊಂಡಿರುವುದಿಲ್ಲ. ಈ ಪ್ರಪಂಚದಲ್ಲಿ ಒಬ್ಬೊಬ್ಬರ ವ್ಯಕ್ತಿತ್ವವೂ ಭಿನ್ನ. ನಾವೇನೆನ್ನುವುದನ್ನು ನಮ್ಮ ಯೋಚನಾ ಶೈಲಿ, ಇಷ್ಟಕಷ್ಟಗಳು, ಆದರ್ಶಗಳು, ಧಾರ್ಮಿಕ, ಸಾಮಾಜಿಕ ನಿಲುವುಗಳು ಹೇಳುತ್ತವೆ. ಹಲವು ಬಾರಿ ನಮಗೆ ಇವರಂದಿದ್ದೂ ಸರಿ, ಅವರಂದಿದ್ದೂ ಸರಿ ಅಂತಲೇ ಅನಿಸುತ್ತದೆ. ನಾವೇನೆನ್ನಬೇಕೆಂಬ ಸ್ಪಷ್ಟ ನಿಲುವಿರುವುದಿಲ್ಲ. ಇದ್ದರೂ ಅದನ್ನು ವ್ಯಕ್ತಪಡಿಸಿದರೆ ಎಲ್ಲಿ ಎದುರಿನವರು ಅದನ್ನು ವಿರೋಧಿಸುತ್ತಾರೋ, ಬೇಸರಿಸಿಕೊಳ್ಳುತ್ತಾರೋ ಎಂದು ನಮ್ಮತನವನ್ನು ಉಳಿಸಿ, ಬೆಳೆಸಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಅಂದ ಮೇಲೆ ನಮ್ಮನ್ನು ಇನ್ನೊಬ್ಬರು ಅರ್ಥಮಾಡಿಕೊಂಡಿಲ್ಲವೆಂದು ಕೊರಗುವುದರಲ್ಲಿ ಅರ್ಥವೇ ಇಲ್ಲ.
ಭೂತದಲ್ಲೇ ಬಂಧಿಯಾಗದಿರಿ.
ಹಳೆಯ ನೆನಪುಗಳು, ಸಾಧನೆಗಳನ್ನೇ ನೆನೆಸುತ್ತಾ ಗತವೈಭವಕ್ಕೆ ಜೋತು ಬೀಳಬೇಡಿ. ಇದು ನಿಮ್ಮ ಪ್ರತಿಕ್ಷಣದ ಬೆಳವಣಿಗೆಗೆ ಅಡ್ಡಗಾಲಾಗುತ್ತದೆ. ಪಶ್ಚಾತ್ತಾಪಕ್ಕೆ ಬಲಿಯಾಗದೆ ಹಳೆಯ ತಪ್ಪುಗಳನ್ನು ಕ್ಷಮಿಸಿ ಮುನ್ನಡೆಯಿರಿ. ನಿಮ್ಮ ತಪ್ಪು ಮತ್ತು ಆಯ್ಕೆಗಳನ್ನು ಒಪ್ಪಿಕೊಳ್ಳಿ. ನಮ್ಮ ಪ್ರತಿ ಕೆಲಸಕ್ಕೂ ನಮ್ಮಲ್ಲಿ ಸಾವಿರ ಕಾರಣಗಳಿರುತ್ತವೆ. ಅದನ್ನೇ ಅಗೆಯುತ್ತಾ ಸಮರ್ಥಿಸಿಕೊಳ್ಳುವ ಬದಲು ಅದರಿಂದ ನೀವೇನು ಕಲಿಯಬಹುದೆಂಬುದನ್ನು ಯೋಚಿಸಿ. ನಮ್ಮ ಸುತ್ತಲೂ ಅನೇಕರಿರುತ್ತಾರೆ. 16 ವರ್ಷದಲ್ಲಿ ಹೇಗಿರುತ್ತಾರೋ 36ನೇ ವರ್ಷದಲ್ಲೂ ಹಾಗೆಯೇ. ಜ್ಞಾನದಲ್ಲಾಗಲೀ, ಕೆಲಸದಲ್ಲಗಲೀ ಸ್ವಲ್ಪವೂ ಬದಲಾವಣೆಯಾಗಿರುವುದಿಲ್ಲ. ಇವರು ಹೊಸತಿಗೆ ತೆರೆದುಕೊಳ್ಳಲು, ಇನ್ನೊಬ್ಬರಿಂದ ಕಲಿಯಲು ಸಿದ್ಧರಿರುವುದಿಲ್ಲ. ಕೊನೆಗೊಮ್ಮೆ ಆವತ್ತು ವಯಸ್ಸಿದ್ದಾಗ ನಾನದರ ಬಗ್ಗೆ ಯೋಚಿಸಿದ್ದರೆ, ಕಲಿತಿದ್ದರೆ... ಎಂದು ಹಲುಬುತ್ತಾರೆ. ಇಂಥವರು ಹೇಗಿರಬಾರದು ಎಂಬುದಕ್ಕೆ ಉದಾಹರಣೆಯಾಗುತ್ತಾರೇ ಹೊರತು ಆದರ್ಶವಾಗುವುದಿಲ್ಲ.
ಅಯ್ಯೋ, ಅವ್ರು ನನ್ನ ಅಪಾರ್ಥ ಮಾಡಿಕೊಂಡರೇನೋ?
ಇನ್ನೊಬ್ಬರು ನಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಎಂಬುದಕ್ಕೆ ಹೆಚ್ಚು ಒತ್ತು ನೀಡಬೇಕಾಗಿಲ್ಲ. ಕೆಲವರು ನಮ್ಮನ್ನು ಇಷ್ಟಪಡುತ್ತಾರೆ, ಕೆಲವರಿಗೆ ಇಷ್ಟವಾಗುವುದಿಲ್ಲ. ಎಲ್ಲರನ್ನೂ ಮೆಚ್ಚಿಸಲು ಆ ಭಗವಂತನಿಂದಲೂ ಸಾಧ್ಯವಿಲ್ಲ ಎಂದ ಮೇಲೆ ಇಷ್ಟಪಡದವರನ್ನು ಓಲೈಸುವ ಕಾರ್ಯಕ್ಕಾಗಿ ಸಮಯ ವ್ಯರ್ಥ ಮಾಡುತ್ತಾ ನಮ್ಮತನವನ್ನೇಕೆ ಬಿಟ್ಟುಕೊಡಬೇಕು? ಎಲ್ಲರ ಅಭಿಪ್ರಾಯವನ್ನು ಗೌರವಿಸುತ್ತಲೇ ನಮ್ಮ ಗೌರವವನ್ನು ಕಾಪಾಡಿಕೊಳ್ಳಬೇಕು. ಇನ್ನೊಬ್ಬರ ನಕಾರಾತ್ಮಕ ಧೋರಣೆಗಳನ್ನೆಲ್ಲ ಒಳಗಿಳಿಸಿಕೊಳ್ಳುತ್ತಾ ಹೋದರೆ ನಮ್ಮ ವ್ಯಕ್ತಿತ್ವ ಬೆಳವಣೆಗೆ ಕುಂಠಿತಗೊಳ್ಳುತ್ತದೆ. ನಿಜವಾಗಿಯೂ ನಮ್ಮನ್ನು ಒಪ್ಪಿಕೊಂಡವರ ಸಲಹೆಗಳಿಗೆ ಮನ್ನಣೆ ನೀಡಿದರೆ ಸಾಕು.
ತೆರೆದ ಪುಸ್ತಕದಂತಿರಿ...
ನಾವ್ಯಾರೂ ಪರಿಪೂರ್ಣರಲ್ಲ. ಪರಿಪೂರ್ಣತೆಯ ಹಾದಿಯಲ್ಲಿ ನಡೆಯುವುದು ಮುಖ್ಯ. ಈ ದಾರಿಯುದ್ದಕ್ಕೂ ಕಲಿಯಲು ಅನೇಕ ಅವಕಾಶವಿದೆ. ಅಂದಮೇಲೂ ನಮ್ಮಲ್ಲಿ ಮುಚ್ಚಿಡಲು ಏನೋ ಇದೆ ಅನಿಸಿದರೆ ಅವು ನಮ್ಮ ದೌರ್ಬಲ್ಯಗಳು. ಅವನ್ನು ಬದಲಾಯಿಸಿಕೊಳ್ಳುವುದರತ್ತ ಗಮನಹರಿಸಬಹುದು. ನಮಗೆ ನಾವು ಸತ್ಯವಾಗಿರಬೇಕು. ನಮ್ಮ ತಪ್ಪುಗಳನ್ನು ಸಮರ್ಥನೆಯೊಂದಿಗೆ ನೋಡುವಾಗ ಇನ್ನೊಬ್ಬರ ತಪ್ಪನ್ನು ಮಾತ್ರ ಘೋರ ಅಪರಾಧದಂತೆ ಕಾಣುವುದರಲ್ಲಿ ಅದೆಷ್ಟು ಪ್ರಾಮಾಣಿಕತೆ ಇದೆ, ಯೋಚಿಸಿ. ವಾದ ಮಾಡುವಾಗ ಎದುರಿನ ವ್ಯಕ್ತಿ ಹೇಳುತ್ತಿರುವುದು ಸತ್ಯ ಹಾಗೂ ನ್ಯಾಯಯುತವಾಗಿದೆ ಎನಿಸಿದರೆ ಒಪ್ಪಿಕೊಂಡು ತಿದ್ದಿಕೊಳ್ಳುವ ಭರವಸೆ ನೀಡಿ. ಇದರಿಂದ ಅನಗತ್ಯ ವಾದವೂ ತಪ್ಪುತ್ತದೆ. ನೀವೂ ಬೆಳೆಯುವಿರಿ.
ಚಿಂತೆ ಬಿಟ್ಟು ಚಿಂತನೆಯಲ್ಲಿ ತೊಡಗಿ...
ಆಗಿದ್ದು ಕೈಮೀರಿದೆ. ಆಗದಿದ್ದುದರ ಬಗ್ಗೆ ಚಿಂತೆ ಹಾಸ್ಯಾಸ್ಪದವೇ ಸರಿ. ಅದಕ್ಕಾಗಿ ಚಿಂತಿಸುವುದು ಬಿಟ್ಟು ಹೇಗೆ ಸರಿ ಮಾಡಿಕೊಳ್ಳಬಹುದೆಂದು ಚಿಂತನೆಗೆ ತೊಡಗಿ. ದಾರಿಯಲ್ಲಿ ನಡೆವಾಗ ಬಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಸಾಂಬಾರು ಮೈಮೇಲೆ ಚೆಲ್ಲಿದರೆ ಅವಮಾನವೆಂದು ಪರಿಗಣಿಸುವ ಬದಲು ನಗುವುದನ್ನು ಕಲಿಯಿರಿ. ಇನ್ನೊಬ್ಬರೊಂದಿಗೆ ಆ ಸನ್ನಿವೇಶವನ್ನು ತಿಳಿಹಾಸ್ಯದೊಂದಿಗೆ ಹಂಚಿಕೊಂಡು ಅವರನ್ನೂ ನಗಿಸಿ. ನಮ್ಮೆಡೆಗೆ ನಾವು ನಗುವುದು ನಮ್ಮನ್ನೂ, ಸುತ್ತಲಿರುವವರನ್ನೂ ಹಗುರಾಗಿಸುತ್ತದೆ.
- ಗೀತಾ ಕೆ.ರಾವ್