ಹಾಗಲ ಸಿಹಿ
ನಮಗೆ ಹಾಗಲಕಾಯಿ ಎಂದಾಕ್ಷಣ ನೆನಪಾಗುವುದು ಮಧುಮೇಹ.
ನಮಗೆ ಹಾಗಲಕಾಯಿ ಎಂದಾಕ್ಷಣ ನೆನಪಾಗುವುದು ಮಧುಮೇಹ. ಹಾಗಲಕಾಯಿ ಡಯಾಬಿಟೀಸ್ಗೆ ರಾಮಬಾಣ ಎಂಬುದು ಗೊತ್ತು. ಆದರೆ ಇದರ ಉಪಯೋಗ ಕೇವಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಮಾತ್ರ ಸೀಮಿತ ಎಂದು ಈ ಬಹೋಪಯೋಗಿ ತರಕಾರಿಯನ್ನು ತಪ್ಪಾಗಿ ತಿಳಿಯಲಾಗಿದೆ.
ವಾಸ್ತವವಾಗಿ ಹಾಗಲ ಯಕೃತ್ತು ಅಸ್ವಸ್ಥತೆಗೆ ಉತ್ತಮ ಔಷಧಿಯಾಗಿದ್ದು, ಲಿವರ್ ಶುದ್ಧೀಕರಿಸುವ ಮತ್ತು ಅದರ ಜೀವಕೋಶಗಳ ಪುನರುತ್ಪಾದನೆಗೆ ಸಹಾಯಕ. ಈ ಆರೋಗ್ಯಕರ ತರಕಾರಿ ಸೌಂದರ್ಯ ಪ್ರಯೋಜನಗಳನ್ನೂ ಹೊಂದಿದೆ. ಇದು ತ್ವಚೆಯನ್ನು ಮೊಡವೆಯಿಂದ ಮುಕ್ತಗೊಳಿಸಿ, ದೋಷರಹಿತ ಮೃಬಣ್ಣ ನೀಡುತ್ತದೆ. ಹೀಗೆ ಹಾಗಲಕಾಯಿ ಇತರೆ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನೂ ಒಳಗೊಂಡಿದ್ದು, ಅವುಗಳಲ್ಲಿ ಕೆಲವು ಇಲ್ಲಿವೆ...
- ಹಾಗಲ ಲಿವರ್ ಶುದ್ಧೀಕರಿಸುವ ಒಂದು ತರಕಾರಿ. ಇದು ಯಕೃತ್ತನ್ನು ಶುದ್ಧಗೊಳಿಸಲು ಮತ್ತು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಕರಿಸುತ್ತದೆ.
- ಹಾಗಲರಸ ಮಧುಮೇಹ-2 ಅನ್ನು ಹೊಂದಿರುವ ರೋಗಿಗಳಿಗೆ ಒಂದು ಉತ್ತಮ ಔಷಧಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ, ಇನ್ಸುಲಿನ್ ಪ್ರತಿರೋಧವನ್ನು ಗುಣಪಡಿಸುತ್ತದೆ.
- ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ. ಇದು ಪಚನ ಮಟ್ಟವನ್ನು ಹೆಚ್ಚಿಸುವ ಆ್ಯಂಟಿ ಆಕ್ಸಿಡೆಂಟ್ಗಳಿಂದಲೂ ಕೂಡಿದೆ. ಇದಲ್ಲದೆ ಹಾಗಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿ.
- ಕಹಿಯಾದ ತರಕಾರಿ ಮತ್ತು ಹಣ್ಣುಗಳು ಬಹುವಾಗಿ ಚರ್ಮಕ್ಕೆ ಪ್ರಯೋದನಕಾರಿ. ಹಾಗಲ ಊರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದಿಂದ ವಿಷಕಾರಿ ಜೀವಾಣುಗಳನ್ನು ತೊಲಗಿಸಲೂ ಸಹಕರಿಸುತ್ತದೆ.
- ನಮ್ಮ ದೇಹವನ್ನು ಶುದ್ಧಿಗೊಳಿಸುವ ಹಾಗಲಕಾಯಿ ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್ಗಳಿಂದ ಕೂಡಿದೆ. ಹಾಗಾಗಿ ಈ ತರಕಾರಿ ರೋಗಗಳ ವಿರುದ್ಧ ಹೋರಾಡಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.
- ಮೂತ್ರಕೋಶ ಮತ್ತು ಮೂತ್ರಪಿಂಡಗಳಿಗೆ ಔಷಧಿ. ಹಾಗಲಕಾಯಿ ಕಿಡ್ನಿಗಳನ್ನು ಶುದ್ಧಿಗೊಳಿಸುತ್ತದೆ ಮತ್ತು ಮೂತ್ರ ಕೋಶದಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಹೋಗಲಾಡಿಸಲು ಔಷಧಿಯಾಗಿ ಕೆಲಸ ಮಾಡುತ್ತದೆ.
- ಉಸಿರಾಟದ ತೊಂದರೆಗಳಿಗೆ ಪ್ರಯೋಜನಕಾರಿ. ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ತೀವ್ರ ಉಸಿರಾಟದ ತೊಂದರೆಗಳಾದ ಅಸ್ತಮಾ ಅಥವಾ ಶ್ವಾಸನಾಳಗಳ ಒಳಪೊರೆಯ ಉರಿಯೂತಗಳನ್ನು ಹತೋಟಿಯಲ್ಲಿಡಬಹುದು.
- ಈ ತರಕಾರಿ ಹೇರಳವಾಗಿ ನಾರಿನಂಶ ಹೊಂದಿದ್ದು, ಮಲಬದ್ಧತೆಯನ್ನು ತಡೆಯುತ್ತದೆ.
- ಈ ತರಕಾರಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಆ್ಯಂಟಿಆಕ್ಸಿಡೆಂಟ್ಗಳಿದ್ದು, ಕ್ಯಾನ್ಸರ್ಕಾರಕ ಜೀವಕೋಶಗಳು ದೇಹದಲ್ಲಿ ಹೆಚ್ಚಾಗುವುದನ್ನು ತಡೆಯುತ್ತದೆ.
- ರಕ್ತದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಹಾಗಲ ಸಹಾಕಾರಿಯಾಗಿದ್ದು, ಇದು ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತವೆ. ಇದರಿಂದ ಹೃದಯ ಆರೋಗ್ಯವಾಗಿರುತ್ತದೆ.
- ರಶ್ಮಿ ಕಾರ್ಗಲ್