ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಆರೋಗ್ಯದ ಅಂದಕ್ಕೆ ಸರ್ಪಗಂಧ

ಸರ್ಪಗಂಧದ ಬೇರನ್ನು ಮುಖ್ಯವಾಗಿ ವಿಪರೀತ ಮಾನಸಿಕ ಖಿನ್ನತೆ, ಜ್ವರ, ನರ ದೌರ್ಬಲ್ಯ, ಹೊಟ್ಟೆ ನೋವು, ಮೂತ್ರ ತೊಂದರೆ, ಪ್ರಸವದ ತೊಂದರೆ, ವಿಷ ಪ್ರಾಶನ...

Srinivasa Murthy VN
Updated On : 30 Oct 2014, 1:18 am

ಸರ್ಪಗಂಧದ ಬೇರನ್ನು ಮುಖ್ಯವಾಗಿ ವಿಪರೀತ ಮಾನಸಿಕ ಖಿನ್ನತೆ, ಜ್ವರ, ನರ ದೌರ್ಬಲ್ಯ, ಹೊಟ್ಟೆ ನೋವು, ಮೂತ್ರ ತೊಂದರೆ, ಪ್ರಸವದ ತೊಂದರೆ, ವಿಷ ಪ್ರಾಶನದ ಸಂದರ್ಭದಲ್ಲಿ ಶಮನಕಾರಿಯಾಗಿಯೂ ಬಳಸುತ್ತಾರೆ....

ಭಾರತದಲ್ಲಿ ಪೂರ್ವದಿಂದಲೂ ಸಸ್ಯ ಜನ್ಯವಾದ ಗಿಡಮೂಲಿಕೆಗಳಿಂದ ರೋಗವನ್ನು ನಿವಾರಿಸಲಾಗುತ್ತಿದೆ. ಅಂಥ ಔಷಧೀಯ ಗುಣವುಳ್ಳ ಸಸ್ಯಗಳಲ್ಲಿ ಸರ್ಪಗಂಧವೂ ಒಂದು. ಉಜ್ವಲ ಹಸಿರಿನ, ಹೊಳಪುಳ್ಳ ಎಲೆಗಳು, ಕೆಂಪು ಪುಷ್ಪ ಪತ್ರದ ಬಿಳಿ ಛಾಯೆಯ ಹೂಗಳು ಇದರ ಪ್ರಮುಖ ಲಕ್ಷಣ.

ಗುಡ್ಡಗಾಡಿನಲ್ಲೂ ಕರ್ನಾಟಕದ ಮಲೆನಾಡು ಪ್ರದೇಶಗಳಾದ ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಹಾಗೂ ಪಶ್ಚಿಮ ಘಟ್ಟಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಹಳ್ಳಿಯಲ್ಲಿ ಈ ಗಿಡವನ್ನು ತುಳಸಿಯೊಂದಿಗೆ ನೆಡುತ್ತಾರೆ. ವಿಷ ಚಿಕಿತ್ಸೆಗೆ ಇದರ ಕಹಿಯಾದ ಬೇರನ್ನು ಬಳಸುವುದರಿಂದ ಮನೆ ಎದುರೇ ಈ ಸಸ್ಯ ನೆಡುವುದು ಪರಿಪಾಠವಾಗಿದೆ. ಭಾರತದಲ್ಲಿ ಸುಮಾರು 3000 ವರ್ಷಗಳಿಂದಲೂ ಔಷಧ ರೂಪವಾಗಿ ಈ ಸಸ್ಯವನ್ನು ಬಳಸುತ್ತಿದ್ದರು ಎಂದು ಚರಕ ಸಂಹಿತೆಯಲ್ಲಿ ಹೇಳಲಾಗಿದೆ.

ಈ ಬೇರಿನಲ್ಲಿ 20ಕ್ಕೂ ಹೆಚ್ಚು ನಮೂನೆಯ ರಾಸಾಯನಿಕಗಳ ಕ್ಷಾರ ಇರುವುದರಿಂದ ಇದಕ್ಕೆ ಅನೇಕ ರೋಗಗಳನ್ನು ನಿವಾರಿಸುವ ಗುಣವಿದೆ. ಇದರ ಬೇರಿನಲ್ಲಿ ರಿಸರ್ಪಿನ್ ಎಂಬ ಸಸ್ಯಕ್ಷಾರವಿದ್ದು, ಆಯುರ್ವೇದ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಇದು ಹೆಚ್ಚಿನ ಎಲ್ಲ ವೈದ್ಯ ಪದ್ಧತಿಗಳಲ್ಲೂ ಬಳಸುವ ಸಸ್ಯ.

ಈ ಬೇರಿನಲ್ಲಿ ನಿದ್ದೆ ಬರಿಸುವ ಉಪಶಾಮಕ ಸ್ತಂಭನ ಗುಣ ಇರುವುದರಿಂದ ಅದು ಅಪಸ್ವಾರ, ರಕ್ತದೊತ್ತಡ, ಉನ್ಮಾದ, ಚಿತ್ತಭ್ರಮೆ ಹಾಗೆಯೇ ಕೋಪವನ್ನು ಶಮನ ಮಾಡುವ ಗುಣ ಹೊಂದಿದೆ. ಇದರ ಕಹಿಗುಣ ಆಯುರ್ವೇದ ವೈದ್ಯಕೀಯ ದೃಷ್ಟಿಯಲ್ಲಿ ನಂಜು, ಕಜ್ಜಿತುರಿ, ಇಸುಬು, ಸರ್ಪಸುತ್ತು ಮತ್ತು ಎಲ್ಲ ತರಹದ ಚರ್ಮರೋಗ ನಿವಾರಿಸುತ್ತದೆ. ಬ್ಯಾಕ್ಟೀರಿಯಾ, ಬೂಸ್ಟು, ವಿಷ, ವೈರಸ್ ಮುಂತಾದುವುಗಳಿಂದ ಉಂಟಾಗುವ ರೋಗಗಳ ಮೇಲಿದು ಅತ್ಯುತ್ತಮ ಪರಿಣಾಮ ಬೀರಬಲ್ಲದು. ಈ ಬೇರನ್ನು ಸರ್ಪಸುತ್ತಿನ ಮೇಲೆ ಹಚ್ಚುವುದರಿಂದ ಕಾಯಿಲೆ ಬೇಗ ನಿವಾರಣೆಯಾಗುತ್ತದೆ.

ಮಾನಸಿಕ ಮತ್ತು ನರಮಂಡಲ ರೋಗಗಳನ್ನು ನಿವಾರಿಸುವ ಶಕ್ತಿ ಈ ಔಷದಕ್ಕಿದೆ. ಹಾವಿನ ಕಡಿತ ಹಾಗೂ ಚೇಳು, ಬೆಕ್ಕು, ಇಲಿ, ವಿಷಜಂತುಗಳ ಕಡಿತಕ್ಕೂ ಇದು ದಿವ್ಯೌಷಧಿ. ಸರ್ಪಗಂಧವು ನಿರೋಧಕ, ನಿವಾರಕ ಮತ್ತು ನಂಜುನಾಶಕವಾಗಿ ಕೆಲಸ ಮಾಡುತ್ತದೆ. ಅಂತೆಯೇ ಆ್ಯಂಟಿಬಯಾಟಿಕ್ ಮತ್ತು ಸ್ಟೆರೈಡ್ಸ್‌ನಂತೆಯೂ ಕೆಲಸ ಮಾಡುತ್ತದೆ. ಆದರಿದು ಇತರೆ ಸ್ಟೆರೈಡ್ಸ್‌ಗಳಂತೆ ದುಷ್ಪರಿಣಾಮ ಬೀರುವುದಿಲ್ಲ. ಇದನ್ನು ಹೋಮಿಯೋಪತಿ ವೈದ್ಯಪದ್ಧತಿ ಪ್ರಕಾರ ಮರ್ದ ಟಿಂಚರ್ ಮಾಡಿ ಬಳಸಿದಲ್ಲಿ ಶೀಘ್ರ ಪರಿಣಾಮ ಬೀರುತ್ತದೆ.

-ಪ.ನಾ.ಹಳ್ಳಿ ಹರೀಶ್ ಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement