ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ

ಶುರುವಾಯ್ತು ಚಳಿಗಾಲ: ತಪ್ಪದೇ ಸಿಹಿ ಗೆಣಸು ಸೇವಿಸಿ, ದೇಹದಲ್ಲಾಗುವ ಚಮತ್ಕಾರ ನೋಡಿ...!

ದಕ್ಷಿಣ ಅಮೇರಿಕಾ ಮೂಲದಿಂದ ಬಂದ ಈ ಸಿಹಿ ಗೆಣಸು, ಇಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ದಕ್ಷಿಣ ಅಮೆರಿಕಾದಲ್ಲಿ ಇದಕ್ಕೆ ಕಮೋಟೆ ಅಥವಾ ಕುಮರ ಎಂಬ ಸ್ಥಳೀಯ ಹೆಸರುಗಳಿವೆ.

ಸಿಹಿ ಗೆಣಸು
Manjula VN
Updated On : 17 Dec 2024, 1:02 pm

ಸಿಹಿ ಗೆಣಸು ಒಂದು ಜಾತಿಯ ಗೆಡ್ಡೆ. ಇದು ಗೆಡ್ದೆ ಜಾತಿಯ ತರಕಾರಿಗಳಲ್ಲಿ ಪ್ರಮುಖವಾದುದು. ಇದರಿಂದ ತುಂಬಾನೇ ಆರೋಗ್ಯ ಪ್ರಯೋಜನಗಳಿವೆ, ಇದರಲ್ಲಿ ಯಥೇಚ್ಚವಾದ ಪೋಷಕಾಂಶಗಳು ತುಂಬಿದೆ. ಚಳಿಗಾಲಕ್ಕೆ ಗೆಣಸು ಹೇಳಿ ಮಾಡಿಸಿದ ಆಹಾರ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಇದರಲ್ಲಿನ ಪೌಷ್ಟಿಕ ಸತ್ವವು ದೇಹ ಹಾಗು ಚರ್ಮಕ್ಕೆ ಬೇಕಾದ ತೇವಾಂಶವನ್ನು ನೀಡುತ್ತದೆ.

ಹೆಸರೇ ಸೂಚಿಸುವಂತೆ ಸಿಹಿ ಗೆಣಸು ಸ್ವಾಭಾವಿಕವಾಗಿ ಸಿಹಿ ರುಚಿಯನ್ನ ಹೊಂದಿರುತ್ತವೆ. ಗೆಣಸು ಬಿ1, ಬಿ2, ಬಿ3, ಬಿ6, ಬಿ9, ಕ್ಯಾಲ್ಸಿಯಂ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಇನ್ನು ಅನೇಕ ಪೋಷಕಾಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.

ಸಿಹಿ ಗೆಣಸಿನ ಮೂಲ

Advertisement

Advertisement

ದಕ್ಷಿಣ ಅಮೇರಿಕಾ ಮೂಲದಿಂದ ಬಂದ ಈ ಸಿಹಿ ಗೆಣಸು, ಇಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ದಕ್ಷಿಣ ಅಮೆರಿಕಾದಲ್ಲಿ ಇದಕ್ಕೆ ಕಮೋಟೆ ಅಥವಾ ಕುಮರ ಎಂಬ ಸ್ಥಳೀಯ ಹೆಸರುಗಳಿವೆ. ಇದರ ಹೂವು ಬಹಳ ಅಂದವಾಗಿ ಇರುವುದರಿಂದ ಅಲಂಕಾರಿಕ ಸಸ್ಯವಾಗಿ ಕೂಡಾ ಬಳಕೆ ಮಾಡುವುದುಂಟು. ಪ್ರಪಂಚದ ಉಷ್ಣ ಮತ್ತು ಉಪೋಷ್ಣವಲಯಗಳಲ್ಲಿನ ದೇಶಗಳಲ್ಲೆಲ್ಲ ಬಹುಪ್ರಾಚೀನ ಕಾಲದಿಂದಲೂ ಬೇಸಾಯದಲ್ಲಿರುವ ಒಂದು ಮುಖ್ಯ ಹಾಗೂ ಸುಪ್ರಸಿದ್ಧ ಆಹಾರಸಸ್ಯ (ಸ್ವೀಟ್ ಪೊಟೇಟೊ) ಈ ಗೆಣಸು ಆಗಿದೆ. ಆಫ್ರಿಕಾ, ಚೀನಾ, ಜಪಾನ್, ದಕ್ಷಿಣ ಅಮೆರಿಕ, ಉತ್ತರ ಅಮೆರಿಕದ ದಕ್ಷಿಣ ರಾಜ್ಯಗಳು. ಆಗ್ನೇಯ ಏಷ್ಯಾ, ಭಾರತ, ವೆಸ್ಟ್‌ ಇಂಡೀಸ್ ಮುಂತಾದೆಡೆಗಳಲ್ಲೆಲ್ಲ ಇದರ ಗೆಣಸನ್ನು ಬೆಳೆಯಲಾಗುತ್ತದೆ.

Also Read

ಬಾದಾಮಿ ತಿನ್ನುವುದರಿಂದ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ? ಇಲ್ಲಿದೆ ಮಾಹಿತಿ

ಸಿಹಿ ಗೆಣಸು ಬೇಸಾಯ

ಗೆಣಸು ನೆಲದಮೇಲೆ ಹರಡಿಕೊಂಡು ಬೆಳೆಯುವ ಒಂದು ಬಳ್ಳಿ. ಸ್ವಭಾವತಃ ಇದು ಬಹುವಾರ್ಷಿಕ ಸಸ್ಯವಾದರೂ ಬೇಸಾಯ ಕ್ರಮದಲ್ಲಿ ಏಕವಾರ್ಷಿಕವೆಂಬಂತೆ ನೋಡಿಕೊಳ್ಳಲಾಗುತ್ತದೆ. ಸಾಧಾರಣವಾಗಿ ಒಂದು ಗಿಡದಲ್ಲಿ 10-15 ಗೆಡ್ಡೆಗಳು ಹುಟ್ಟುತ್ತವೆ.

ಗಡ್ಡೆ-ಗೆಣಸುಗಳು ಪೂರ್ವಿಕರ ಕಾಲದಿಂದಲೇ ನಮ್ಮ ಆಹಾರವಾಗಿ ಬಳಕೆಯಾಗುತ್ತಿದೆ. ಅದರಲ್ಲೂ ಮರಗೆಣಸಿಗಿಂತಲೂ ಸಿಹಿ ಗೆಣಸು ಎಲ್ಲರಿಗೂ ಇಷ್ಟವಾಗುವಂಥ ಗಡ್ಡೆ. ತಿಳಿಗುಲಾಬಿ, ಕಂದು, ತಿಳಿ ಹಳದಿ, ನೇರಳೆ ಮುಂತಾಗಿ ಒಂದಕ್ಕಿಂತ ಹೆಚ್ಚು ಬಣ್ಣಗಳಲ್ಲಿರುವ ಈ ಗೆಣಸಿನ ಎಲ್ಲ ಬಣ್ಣಗಳೂ ಆರೋಗ್ಯಕ್ಕೆ ಒಳ್ಳೆಯವೆ. ಇದರ ಬಣ್ಣ ಗಾಢವಾದಷ್ಟೂ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ತಿಳಿಯಬಹುದು.

ಗೆಣಸು ಆರೋಗ್ಯಕರ ಆಹಾರಗಳಲ್ಲೊಂದಾಗಿದ್ದು, ಇದನ್ನು ಬೇಯಿಸಿ ಇಲ್ಲವೆ ಸುಟ್ಟು ತಿನ್ನುವುದಲ್ಲದೆ ಇದರಿಂದ ರೊಟ್ಟಿಗಳನ್ನೂ ಕೆಲವರು ತಯಾರಿಸುತ್ತಾರೆ. ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು, ಪಲ್ಯ, ಭಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಲಾಗುತ್ತದೆ, ಸಲಾಡ್‌ಗೆ, ಚಾಟ್‌ಗಳಿಗೆ ಹಾಕಿ ರುಚಿ ಹೆಚ್ಚಿಸಲಾಗುತ್ತದೆ. ಬಜ್ಜಿಗಳ ರೀತಿಯಲ್ಲಿಯೂ ಕೆಲವರು ಸವಿಯುತ್ತಾರೆ.

Also Read

World Diabetes Day: ಮಕ್ಕಳಲ್ಲಿ ಮಧುಮೇಹ ತಡೆಯುವುದು ಹೇಗೆ...?

ಗೆಣಸು ಗೆಡ್ಡೆಯನ್ನು ತಿನ್ನುವುದರಿಂದ ಆಗುವ ಲಾಭಗಳೇನು?

ಸಿಹಿಗೆಣಸಿನಲ್ಲಿ ಪೋಷಕಾಂಶಗಳ ಕೊರತೆ ಇಲ್ಲ, ಇದನ್ನು ತಿಂದರೆ ದೇಹಕ್ಕೆ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಫೈಬರ್ ಯಂತಹ ಪೋಷಕಾಂಶಗಳು ಹೇರಳವಾಗಿ ಸಿಗುತ್ತವೆ. ಹಸಿಯಾಗಿ ಸೇವಿಸುವುದಕ್ಕಿಂತಲೂ ಬೇಯಿಸಿ ಸೇವಿಸುವುದು ಬಹಳ ಉಪಯುಕ್ತವಾಗಿದೆ.

ದೇಹವನ್ನು ಆರೋಗ್ಯಕರವಾಗಿಡುವ ಜೊತೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ, ಇಲ್ಲದಿದ್ದರೆ ನಾವು ಅನೇಕ ರೋಗಗಳಿಗೆ ಒಳಗಾಗಬೇಕಾಗುತ್ತದೆ. ನಿಯಮಿತವಾಗಿ ಸಿಹಿ ಗೆಣಸನ್ನು ಸೇವಿಸಿದರೆ, ಶೀತ, ಕೆಮ್ಮು, ಜ್ವರ ಮತ್ತು ಇತರ ವೈರಲ್ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ. ಏಕೆಂದರೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಈ ಆಹಾರದಲ್ಲಿ ಅಧಿಕವಾಗಿರುತ್ತದೆ.

ಗೆಣಸಿನಲ್ಲಿ ನಾರಿನ ಅಂಶ ವಿಫುಲವಾಗಿದೆ. ಹೆಚ್ಚು ನಾರು ಇರುವಂಥ ಆಹಾರಗಳು ನಮಗೆ ಹಲವು ರೀತಿಯಲ್ಲಿ ಉಪಕಾರವನ್ನು ಮಾಡಬಲ್ಲವು. ಅದರಲ್ಲೂ ಕಳ್ಳ ಹಸಿವನ್ನು ಮಟ್ಟ ಹಾಕುವಲ್ಲಿ ಇದರ ನೆರವು ಅಗತ್ಯವಾಗಿ ಬೇಕಾಗುತ್ತದೆ. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವ ಇವು, ತಿಂದ ತೃಪ್ತಿಯನ್ನು ಹೆಚ್ಚಿಸುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಅಡಗಿರುವ ಕೊಬ್ಬಿನಂಶವನ್ನು ಕರಗಿಸಿದರೆ, ಕರಗದಿರುವ ನಾರು ಮಲಬದ್ಧತೆಯನ್ನು ನಿವಾರಿಸುತ್ತದೆ. ಗ್ಯಾಸ್ನಂತಹ ಯಾವುದೇ ಸಮಸ್ಯೆಗಳಿದ್ದರೆ ಇದರಿಂದ ಮುಕ್ತಿ ಸಿಗಲಿದೆ.

ಇದರಲ್ಲಿರುವ ಪೊಟಾಶಿಯಂ ಅಂಶವು ಡೈಯುರೇಟಿಕ್‌ನಂತೆ ಕೆಲಸ ಮಾಡುತ್ತದೆ. ಅಂದರೆ ಹೆಚ್ಚುವರಿ ನೀರಿನಂಶ ದೇಹದಲ್ಲಿ ಉಳಿಯದಂತೆ, ಹೊಟ್ಟೆ ಉಬ್ಬರಿಸದಂತೆಯೂ ಪರಿಣಾಮ ಬೀರುತ್ತದೆ. ತೂಕ ಇಳಿಸುವವರಿಗೂ ಇದು ಉಪಯುಕ್ತ ಎನಿಸಬಹುದು. ಅಂದರೆ, ನಾರಿನಂಶ ಹೆಚ್ಚಿರುವುದರಿಂದ ಬೇಗ ಹಸಿವಾಗುವುದಿಲ್ಲ. ಆಗಾಗ ತಿನ್ನುವ ಬೇಡಿಕೆಯನ್ನು ಮಟ್ಟ ಹಾಕಬಹುದು. ಜೊತೆಗೆ ದೇಹದಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹೊಟ್ಟೆಯೆಲ್ಲ ಹಗುರವಾಗಿರುವಂತೆ ಮಾಡುತ್ತದೆ.

Also Read

ಗರ್ಭಧಾರಣೆ-ಮಗುವಿಗೆ 2 ವರ್ಷ ತುಂಬುವವರೆಗೆ ಸಕ್ಕರೆ ಸೇವನೆಗೆ ನಿರ್ಬಂಧ; ಶೇ.35ರಷ್ಟು ಮಧುಮೇಹ ಅಪಾಯ ಕಡಿಮೆ: ಅಧ್ಯಯನ

ಸಿಹಿಗೆಣಸಿನಲ್ಲಿ ಕ್ಯಾರೊಟಿನಾಯ್ಡ್‌ಗಳು ಅಧಿಕವಾಗಿದೆ. ಅದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸಿಹಿಗೆಣಸಿನಲ್ಲಿರುವ ಆಂಥೋಸಯಾನಿನ್, ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್‌ನಿಂದ ದೂರವಿರಲು ನಿಮ್ಮ ಆಹಾರದಲ್ಲಿ ಸಿಹಿಗೆಣಸನ್ನು ನಿಯಮಿತವಾಗಿ ಬಳಸಬೇಕು ಎಂದು ತಜ್ಞರು ಹೇಳುತ್ತಾರೆ.

ಚಳಿಗಾಲದಲ್ಲಿ ಚರ್ಮ ಒಣಗುತ್ತದೆ. ಈ ಅವಧಿಯಲ್ಲಿ ಸಿಹಿಗೆಣಸು ತಿಂದರೆ, ತ್ವಚೆ ತೇವಾಂಶದಿಂದ ಕೂಡಿರುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮಕ್ಕೆ ವಯಸ್ಸಾಗುವುದನ್ನು ತಡೆಯುತ್ತದೆ.

ಸಿಹಿ ಗೆಣಸಿನಲ್ಲಿ ರಕ್ತದೊತ್ತಡದ ಮಟ್ಟವನ್ನು ಸುಧಾರಿಸುತ್ತದೆ. ಪೊಟ್ಯಾಸಿಯಮ್ ಕೂಡ ಹೆಚ್ಚಾಗಿ ಇರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಮತ್ತು ಶಾಂತತೆಯ ಭಾವನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಒತ್ತಡದ ಸಮಯದಲ್ಲಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್‌ಗಳ ಮೇಲೆ ಪ್ರಭಾವ ಬೀರುವ ಅಂಶ ಇಟ್ಟುಕೊಂಡಿದೆ.

ಸಿಹಿ ಗೆಣಸುಗಳಲ್ಲಿ ಕಂಡುಬರುವ ಕೋಲೀನ್ ಎಂಬ ಪೋಷಕಾಂಶವು ಮೆದುಳಿನ ಬೆಳವಣಿಗೆ ಮತ್ತು ಅರಿವಿನ ಕಾರ್ಯಕ್ಕೆ ಅತ್ಯಗತ್ಯವಾಗಿದೆ. ಇದರಿಂದ ಮೆದುಳಿನ ಕಾರ್ಯ ಚುರುಕಾಗಿಸುತ್ತದೆ.

Also Read

ಎಚ್ಚರ... ಅತಿಯಾದ ಕಾಫಿ ಸೇವನೆಯಿಂದ BP, Anxiety ಹೆಚ್ಚಳ!

ಸಿಹಿ ಗೆಣಸಿನಲ್ಲಿ ಸಿಹಿ ಸೂಚ್ಯಂಕ ಕಡಿಮೆ ಇದ್ದು, ರಕ್ತದಲ್ಲಿ ನಿಧಾನವಾಗಿ ಗ್ಲುಕೋಸ್ ಬಿಡುಗಡೆ ಆಗುವಂತೆ ನೋಡಿಕೊಳ್ಳುತ್ತದೆ. ಇದು ರಕ್ತದ ಹರಿವಿನಲ್ಲಿ ಹೆಚ್ಚಾಗದಂತೆ ರಕ್ಷಣೆ ಮಾಡಿ ಬ್ಲಡ್ ಶುಗರ್ ಲೆವೆಲ್ ಏರಿಕೆ ಆಗದಂತೆ ತಡೆಯುತ್ತದೆ. ಹೀಗಾಗಿ ಮಧುಮೇಹ ಹೊಂದಿರುವವರು ಆಗಾಗ ಸಿಹಿ ಗೆಣಸು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.

ಸಿಹಿ ಗೆಣಸಿನಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ದೃಷ್ಟಿಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಇದು ಕಣ್ಣಿನ ಪೊರೆ, ದೃಷ್ಟಿ ದೋಷ, ಕಣ್ಣುಗಳಲ್ಲಿ ಉರಿ ಇನ್ನು ಅನೇಕ ಸಮಸ್ಯೆಗಳಿಂದ ಪಾರು ಮಾಡುತ್ತದೆ. ಅಲ್ಲದೇ, ಇದರಲ್ಲಿನ ವಿಟಮಿನ್ ಸಿ ಮತ್ತು ಐರನ್ ಬಿಳಿ ಹಾಗು ಕೆಂಪು ರಕ್ತ ಕಣವನ್ನು ವೃದ್ಧಿಸುತ್ತದೆ. ಯಾವುದೇ ರೋಗವು ಹತ್ತಿರ ಸುಳಿಯದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇಷ್ಟೆಲ್ಲಾ ಆರೋಗ್ಯ ಪ್ರಯೋಜನ ಹೊಂದಿರುವ ಗೆಣಸಿನಲ್ಲಿ ಕೆಲ ಸಮಸ್ಯೆಗಳೂ ಇವೆ. ಗೆಣಸಿನಲ್ಲಿ ಪಿಷ್ಟ ಅಂಶವನ್ನು ಹೊಂದಿವೆ ಎಂಬುದನ್ನು ನೆನಪಿಡಬೇಕು.. ಹೀಗಾಗಿ ಇವುಗಳನ್ನು ಮಿತವಾಗಿ ಸೇವನೆ ಮಾಡುವುದು ಹೆಚ್ಚು ಸೂಕ್ತ. ಒಬ್ಬ ಸಾಮಾನ್ಯ ವ್ಯಕ್ತಿ ದಿನಕ್ಕೆ ಸುಮಾರು 100 ಗ್ರಾಂ ಸಿಹಿ ಗೆಣಸನ್ನು ಸೇವಿಸಬಹುದು. ಮಧುಮೇಹ ಇರೋರು ವಾರಕ್ಕೆ ಎರಡು ಬಾರಿ ಸೇವನೆ ಮಾಡಿದರೆ ಉತ್ತಮ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement