'ದಾಸ ಸಾಹಿತ್ಯದ ರಸಗಂಗೆ ಬತ್ತಿ ಹೋಗದು'
ಕಾಸರಗೋಡು: ದಾಸ ಸಾಹಿತ್ಯವೆಂದರೆ ವಿಶ್ವಸಾಹಿತ್ಯ. ಗಂಗಾನದಿ ಬತ್ತಿ ಹೋದರೂ ದಾಸ ಸಾಹಿತ್ಯದ ರಸಗಂಗೆ ಬತ್ತಿ ಹೋಗದು ಎಂದು ತಿರುಮಲ ತಿರುಪತಿ ದೇವಸ್ಥಾನಂ ದಾಸ ಪ್ರಾಜೆಕ್ಟ್ನ ವಿಶೇಷ ಅಧಿಕಾರಿ ಪಿ.ಆರ್. ಆನಂದ ತೀರ್ಥಾಚಾರ್ ಪಗಡಾಲ್ ಹೇಳಿದ್ದಾರೆ.
ಶ್ರೀಮತಿ ವೀಣಾ ಪ್ರಸನ್ನ ಶ್ಯಾನುಭೋಗ್ ಕೂಡ್ಲು ಅವರ ಸಾರಥ್ಯದಲ್ಲಿಲ 2010ರಲ್ಲಿ ಪ್ರಾರಂಭಗೊಂಡ ಹೃಷಿಕೇಶ ವೃಂದ, ವಿಷ್ಣುಮಂಗಲ ಕೂಡ್ಲು ಕಾಸರಗೋಡು ಇದರ ತಂಡದವರು ಬೇರೆ ಬೇರೆ ರಾಜ್ಯಗಳಲ್ಲಿ 125ಕ್ಕೂ ಹೆಚ್ಚಿನ ಸಮೂಹ ದಾಸ ಸಂಕೀರ್ತನಾ ಗಾಯನ ಕಾರ್ಯಕ್ರಮಗಳನ್ನು ನೀಡಿದ ಸವಿನೆನಪಿಗಾಗಿ ಹಾಗೂ ವಿಶ್ವಕಲ್ಯಾಣಕ್ಕಾಗಿ ಕೇರಳದಲ್ಲೇ ಪ್ರಥಮ ಬಾರಿಗೆ ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ತಿರುಮಲ ದೇವಸ್ಥಾನದಿಂದ ಆಗಮಿಸಿದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸದೇವರ ಕಲ್ಯಾಣೋತ್ಸವದಂಗವಾಗಿ ಆಯೋಜಿಸಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವೆಮೂಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ನಿರ್ವಹಿಸಿದ ಶ್ರೀ ಪುತ್ತಿಗೆ ಮಠದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಬಿ. ಗೋಪಾಲಾಚಾರ್ ಮಾತನಾಡಿದರು.
ಮಧೂರು ಗ್ರಾ.ಪಂ. ಅಧ್ಯಕ್ಷ ಕೆ. ಮಾಧವ ಮಾಸ್ತರ್, ಕೂಡ್ಲು ಶ್ರೀ ಗೋಪಾಲಕೃಷ್ಣ, ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್, ಮಂಗಳೂರಿನ ಉದ್ಯಮಿ ಟಿ. ಗಣಪತಿ ಪೈ, ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾಸರಗೋಡಿನ ಉದ್ಯಮಿ ಸುರೇಶ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹೃಷಿಕೇಶ ಭಕ್ತವೃಂದದ ಬೆಳವಣಿಗೆಯಲ್ಲಿ ತಮ್ಮದೇ ಕೊಡುಗೆ ನೀಡಿದ ವಿಷ್ಣು ಶ್ಯಾನುಭೋಗ್, ಕಾಪು ಜಗನ್ನಾಥ ಶಣೈ, ಜಗದೀಶ ಕೂಡ್ಲು, ರಾಧಾಕೃಷ್ಣ ಕೆ. ಉಳಿಯತಡ್ಕ, ಗುರುಪ್ರಸಾದ್ ಕೋಟೆಕಣಿ, ಪ್ರಸನ್ನ ಶ್ಯಾನುಭೋಗ್, ಸಂಧ್ಯಾ ವಾಮನರಾವ್, ಪ್ರದೀಪ್ ಬೇಕಲ್ ಅವರನ್ನು ಪಿ.ಆರ್. ಆನಂದ ತೀರ್ಥಾಚಾರ್ ಪಗಡಾಲ್ ಸನ್ಮಾನಿಸಿದರು. ಶ್ರೀನಿವಾಸ ಕಲ್ಯಾಣೋತ್ಸವದ ಸಾರಥ್ಯ ವಹಿಸಿದ ವೀಣಾ- ಪ್ರಸನ್ನ ಶ್ಯಾನುಭೋಗ್ ಅವರಿಗೆ 'ದಾಸ ಬಂಧು' ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.