ದಿಲ್ಲಿಯಲ್ಲಿ ಪಿ.ಬಿ. ಡಾ. ಲಲಿತಾರಾವ್ಗೆ ಶ್ರದ್ಧಾಂಜಲಿ
ನವದೆಹಲಿ: ಮುಂಬೈನಲ್ಲಿ ನಿಧನರಾದ ಮಹಾರಾಷ್ಟ್ರದ ಮಾಜಿ ಸಚಿವೆ, ಸ್ವಾತಂತ್ರ್ಯ ಹೋರಾಟಗಾರ್ತಿ, ವೈದ್ಯೆ, ಲೇಖಕಿ, ಕಲಾವಿದೆ, ಮುಂಬೈ ಕನ್ನಡ ಕಲಾಕೇಂದ್ರ, ಗೋಕುಲ ಸಂಸ್ಥೆಗಳ ಮಾಜಿ ಅಧ್ಯಕ್ಷೆ, ಹೊರನಾಡ ಕನ್ನಡ ಮಹಾ ಪೋಷಕಿ ಡಾ. ಶ್ರೀಮತಿ ಲಲಿತಾರಾವ್ ಅವರಿಗೆ ದೆಹಲಿ ಕನ್ನಡಿಗ ಪತ್ರಿಕೆ ಆಶ್ರಯದಲ್ಲಿ ದಿಲ್ಲಿಯಲ್ಲಿ ಆಗಸ್ಟ್ 6ರಂದು ಸಾಹಿತಿಗಳು, ಕಲಾವಿದರು, ವೈದ್ಯರು, ಪ್ರಾಧ್ಯಾಪಕರು, ಕನ್ನಡ ಕಾರ್ಯಕರ್ತರು ಸಭೆ ಸೇರಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ. ಸಾಮಗ ಮಾತನಾಡಿ ಮಂಗಳೂರಲ್ಲಿ ಜನಿಸಿ ಮುಂಬೈನಲ್ಲಿ ಶಿಕ್ಷಣ ಪಡೆದು ಸ್ವಾತಂತ್ರ್ಯ ಹೋರಾಟಕ್ಕಿಳಿದು ಆರೋಗ್ಯ ಸಚಿವೆಯಾಗಿ, ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆ ಅಧ್ಯಕ್ಷೆಯಾಗಿ, ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಲೇಖನ ಕೃತಿ, ಲೇಖನ ಬರೆದ ಡಾ. ಲಲಿತಾರಾವ್ ಮುಂಬೈನ ಕನ್ನಡ ಕಲಾಕೇಂದ್ರ, ಗೋಕುಲ ಸಂಸ್ಥೆಗಳ ಅಧ್ಯಕ್ಷೆಯಾಗಿ ಹೊರನಾಡಲ್ಲಿ ಕನ್ನಡದ ಪ್ರಗತಿಗೆ ಅವಿರತ ಶ್ರಮಿಸಿದ್ದಾರೆ. 1996ರಲ್ಲಿ ಹೈದ್ರಾಬಾದಿನಲ್ಲಿ ನಡೆದ 6ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1977ರಲ್ಲಿ ದಿಲ್ಲಿಯಲ್ಲಿ ನಡೆದ 14ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಶ್ರೇಷ್ಠ ಹೊರನಾಡ ಕನ್ನಡತಿ ಪ್ರಶಸ್ತಿ ಪಡೆದು ಸನ್ಮಾನಿತರಾಗಿದ್ದರು. ದೆಹಲಿ ಕನ್ನಡಿಗ ದಿಲ್ಲಿಯಲ್ಲಿ 2014 ಏಪ್ರಿಲ್ 5-6ರಂದು ಏರ್ಪಡಿಸಲಿರುವ 31ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದ ವೇದಿಕೆಗೆ ಅವರ ಹೆಸರನ್ನಿಟ್ಟು ಅವರ ಸೇವೆ ಕುರಿತು ಗೋಷ್ಠಿ ಏರ್ಪಡಿಸಲಾಗುವುದು. ಡಾ. ರಾವ್ ಸ್ಮಾರಕ ಕರ್ನಾಟಕದ ವಿಶಿಷ್ಟ ವೈದ್ಯರೊಬ್ಬರಿಗೆ ಪ್ರಶಸ್ತಿ ನೀಡಲಾಗುವುದೆಂದು ಪ್ರಕಟಿಸಿದರು.
ಕಲಾವಿದೆ ಶ್ರೀಮತಿ ರಾಜೇಶ್ವರಿಭಟ್ ಮಾತನಾಡಿ, ಮುಂಬೈನ ತುಳು ಸಂಘದ ಸ್ಥಾಪಕ ಅಧ್ಯಕ್ಷೆಯಾದ ಡಾ. ರಾವ್ ತುಳು ಭಾಷಾ ಸಂಸ್ಕೃತಿ ಪ್ರಗತಿಗೂ ಅಪ್ರತಿಮ ಕೊಡುಗೆ ಸಲ್ಲಿಸಿದ್ದರು ಎಂದರು. ಹಿರಿಯ ವೈದ್ಯೆ ಹಾಗೂ ಲೇಖಕಿ ಡಾ. ಶಕುಂತಲಾ ರಾವ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ.ರಾವ್ ಬದುಕಿನ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.