'ಸುಬ್ಬಿ ಇಂಗ್ಲಿಷ್ ಕಲ್ತದು' ಕೃತಿ ಬಿಡುಗಡೆ
ಕಾಸರಗೋಡು: ಮಹಿಳೆ ರಚಿಸಿದ ಮೊದಲ ಹವಿಗನ್ನಡ ನಾಟಕ 'ಸುಬ್ಬಿ ಇಂಗ್ಲಿಷ್ ಕಲ್ತದು' ಕಾಸರಗೋಡು ಮೀಯಪದವಿನ ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದಲ್ಲಿ ಬಿಡುಗಡೆ ಮಾಡಲಾಯಿತು.
ಶಾಲೆಯ ಹಳೆ ವಿದ್ಯಾರ್ಥಿನಿ ಲಕ್ಷ್ಮೀ 30 ವರ್ಷಗಳ ಹಿಂದೆ 1984ರಲ್ಲಿ ಏಳನೇ ತರಗತಿಯಲ್ಲಿ ಓದತ್ತಿರುವಾಗ ಈ ನಾಟಕ ರಚಿಸಿದರು.
ಇದು ಮಹಿಳೆ ರಚಿಸಿದ ಮೊದಲ ಹವ್ಯಕ ನಾಟಕ ಎಂಬ ದಾಖಲೆಗೆ ಪಾತ್ರವಾಗಿದೆ. 30 ವರ್ಷಗಳ ಬಳಿಕ ಪುಸ್ತಕ ಮಾಡಿ ಶಾಲೆಗೆ ಅರ್ಪಿಸಿದರು. ಮೊದಲ ಪ್ರತಿಯನ್ನು ತಾಯಿ ಸರಸ್ವತಿ ಅಮ್ಮ ವಾರಣಾಸಿ ಅವರಿಗೆ ಡಾ. ಲಕ್ಷ್ಮೀ ಜಿ.ಪ್ರಸಾದ್ ನೀಡಿದರು.
ಸಾಹಿತಿ ಹರ್ಷದ್ ವರ್ಕಾಡಿ ಮಾತನಾಡಿ, ಲಕ್ಷ್ಮೀ ಜಿ.ಪ್ರಸಾದ್ ಪ್ರಸಿದ್ಧ ಬ್ಲಾಗರ್ ಮಾತ್ರವಲ್ಲದೆ ಹವ್ಯಕ ಕನ್ನಡದ ಮೊದಲ ನಾಟಕಗಾರ್ತಿ ಆಗಿರುವುದು ಹೆಮ್ಮೆ ವಿಚಾರ ಎಂದರು.