'ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ'ಗೆ ಡಾ.ಆಳ್ವ ಆಯ್ಕೆ
ಮುಂಬೈ: ಚೆಂಬೂರು ಕರ್ನಾಟಕ ಸಂಘದ ಚೊಚ್ಚಲ ಹೊರನಾಡಿನ ಪ್ರಶಸ್ತಿಗಳಲ್ಲೆಲ್ಲ ಗರಿಷ್ಟ ಮಟ್ಟದ ಮಾನ ನಿಧಿಯನ್ನೊಳಗೊಂಡ 'ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ'ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಎಂ. ಮೋಹನ್ ಆಳ್ವ ಅವರನ್ನು ಆರಿಸಲಾಗಿದೆ. ಸಂಘದ ಅಧ್ಯಕ್ಷ ಜಯ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಹವಾಸ 2014 ಸಂಭ್ರಮ ಸಮಾರಂಭವನ್ನು 29ರಂದು ಪೆರ್ಣಂಕಿಲ ಹರಿದಾಸ ಭಟ್ ಉದ್ಘಾಟಿಸಲಿದ್ದು, ಬಂಟರ ಸಂಘದ ಅಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಭಂಡಾರಿ ಮಹಾ ಮಂಡಲದ ನಿಕಟಪೂರ್ವ ಅಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ ಮತ್ತಿತರರು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಮಾಡಲಿರುವರು. ಇದೇ ಶುಭಾವಸರದಲ್ಲಿ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಯರಾಜ್ ಜೈನ್, ಎಸ್. ಕೆ. ಸುಂದರ್ ಅವರಿಗೆ ಸುಬ್ಬಯ್ಯ ಶೆಟ್ಟಿ ದತ್ತಿ ಗೌರವ ಪ್ರದಾನಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ನ್ಯಾ. ಎಚ್.ಕೆ ಸುಧಾಕರ್, ಕೋಶಾಧಿಕಾರಿ ಯೋಗೇಶ್ ಗುಜಝ್ ತಿಳಿಸಿದ್ದಾರೆ.