ಬೆಂಗಳೂರು: ಗೋದಾವರಿ ಯಂತ್ರದ ಕೆಲಸ ಪೂರ್ಣಗೊಂಡಿದ್ದರಿಂದಾಗಿ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಉತ್ತರ ಭಾಗದ ಸುರಂಗ ಕೊರೆಯುವ ಕೆಲಸ ಪೂರ್ಣಗೊಂಡಂತಾಗಿದೆ.
ಈಗಾಗಲೇ ಉತ್ತರ ಭಾಗದ ಜೋಡಿ ಸುರಂಗ ಮಾರ್ಗದಲ್ಲಿ ಒಂದು ಸುರಂಗದಲ್ಲಿ ಹಳಿ ಹಾಕುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಈಗ ಪೂರ್ಣಗೊಂಡಿರುವ ಇನ್ನೊಂದು ಮಾರ್ಗದಲ್ಲಿ ಹಳಿ ಹಾಕುವ ಕೆಲಸ ಇನ್ನು 10 ದಿನಗಳಲ್ಲಿ ಶುರುವಾಗಲಿದೆ. ಇನ್ನು ಉತ್ತರ-ದಕ್ಷಿಣ ಕಾರಿಡಾರ್‌ನ ದಕ್ಷಿಣ ಭಾಗದಲ್ಲಿ ಕೃಷ್ಣ ಮತ್ತು ಕಾವೇರಿ ಯಂತ್ರಗಳು ಸುರಂಗ ಕೊರೆಯುವ ಕೆಲಸ ಮಾಡುತ್ತಿವೆ. 747 ಮೀ. ಸುರಂಗ ಕೊರೆಯುವ ಕೆಲಸದಲ್ಲಿ ಕೃಷ್ಣ ಟಿಬಿಎಂ ಮೆಜೆಸ್ಟಿಕ್‌ನಿಂದ 250 ಮೀ. ಹಾಗೂ ಕಾವೇರಿ ಯಂತ್ರ ಕೇವಲ 100 ಮೀ. ದೂರದಲ್ಲಿವೆ. ಕಾವೇರಿ ಯಂತ್ರ ಇನ್ನು 40 ದಿನಗಳಲ್ಲಿ ಮೆಜೆಸ್ಟಿಕ್ ತಲುಪಲಿದ್ದು, ಕೃಷ್ಣ ಇನ್ನು ಎರಡೂವರೆ ತಿಂಗಳಲ್ಲಿ ಕೆಲಸ ಮುಗಿಸಲಿದೆ.
ಒಂದೂವರೆ ವರ್ಷ ವಿಳಂಬವಾದ 'ನಮ್ಮ ಮೆಟ್ರೋ'
2013ರಲ್ಲಿ ಗೋದಾವರಿ ಯಂತ್ರ ಸುರಂಗ ಕೊರೆಯುತ್ತಿದ್ದ ವೇಳೆ ಮಧ್ಯದಲ್ಲಿ ಗಟ್ಟಿಬಂಡೆ ಸಿಕ್ಕ ಪರಿಣಾಮ ಯಂತ್ರದ ಕಟ್ಟರ್ ಹೆಡ್‌ಹಾನಿಯಾಗಿ ಒಂದೂವರೆ ವರ್ಷಗಳ ಕಾಲ ಕೆಲಸ ಸ್ಥಗಿತಗೊಳಿಸಲಾಗಿತ್ತು. ನಂತರ ಕಟ್ಟರ್ ಹೆಡ್ ಬದಲಾಯಿಸಿ ಕೆಲಸ ಆರಂಭಿಸಿದ್ದ ಯಂತ್ರ ಇದೀಗ 955 ಮೀ. ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳಿಸಿದೆ. ಜೋಡಿ ಸುರಂಗ ಮಾರ್ಗದಲ್ಲಿ ಮಾರ್ಗರಿಟಾ ಟಿಬಿಎಂ 2015ರ ನವೆಂಬರ್‌ನಲ್ಲಿಯೇ ಇನ್ನೊಂದು ಮಾರ್ಗ ಕೊರೆಯುವ ಕೆಲಸ ಪೂರ್ಣಗೊಳಿಸಿದೆ.
ಜೋಡಿ ಸುರಂಗ ಮಾರ್ಗದಲ್ಲಿ ಗೋದಾವರಿ ಯಂತ್ರ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ಗೆ ತಲುಪಿ ನಂತರ ಅಲ್ಲಿಂದ ವಾಪಸ್ ಇನ್ನೊಂದು ಮಾರ್ಗವನ್ನು ಕೊರೆಯುವ ಕೆಲಸ ಮಾಡಬೇಕಿತ್ತು. ಆದರೆ, ಗೋದಾವರಿ ಯಂತ್ರದ ಕಟರ್ ಹೆಡ್ ಹಾಳಾಗಿದ್ದರಿಂದಾಗಿ ಕೆಲಸ ಸ್ಥಗಿತಗೊಳಿಸಲಾಗಿತ್ತು. ಇಟಲಿಯಿಂದ ಹೊಸ ಕಟ್ಟರ್ ಹೆಡ್ ತರಿಸಿ ಗೋದಾವರಿ ಯಂತ್ರಕ್ಕೆ ಜೋಡಿಸಿದ ನಂತರ ಮತ್ತೆ ಕೆಲಸ ಆರಂಭಿಸಲಾಗಿತ್ತು. ಈ ಪ್ರಕ್ರಿಯೆಯಿಂದಾಗಿ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ವರೆಗಿನ ಸುರಂಗ ಕೊರೆಯುವ ಕೆಲಸ ಒಂದು ವರ್ಷ ತಡವಾಗಿ ಪೂರ್ಣಗೊಡಂತಾಗಿದೆ.
ಕಟ್ಟರ್ ಹೆಡ್ ಬದಲಾವಣೆಗೆ ಸಾಹಸ
2014ರ ಜೂನ್‌ನಲ್ಲಿ ಗೋದಾವರಿ ಯಂತ್ರದ ಕಟ್ಟರ್ ಹೆಡ್ ದುರಸ್ತಿಗೆ ಬಂದಿತ್ತು. ಕಟ್ಟರ್ ಹೆಡ್ ಸಂಪೂರ್ಣ ಜಖಂಗೊಂಡು ಬದಲಾಯಿಸಲೇಬೇಕಾಗಿತ್ತು. ಆದರೆ, ಗೋದಾವರಿ ಕೆಟ್ಟು ನಿಂತ ಜಾಗದ ಮೇಲೆ ರೈಲು ಮಾರ್ಗವಿತ್ತು. ಹೀಗಾಗಿ 70 ಟನ್ ಇದ್ದ ಕಟ್ಟರ್ ಹೆಡ್ ಹೊರತೆಗೆಯುವುದು ಬಹಳ ಕಷ್ಟವಾಗಿತ್ತು. ಅದಕ್ಕಾಗಿ ವಿದೇಶಗಳ ತಜ್ಞರ ನೆರವು ಪಡೆದ ಬಿಎಂಆರ್‌ಸಿಎಲ್ ಅಧಿಕಾರಿಗಳು ಗೋದಾವರಿ ಯಂತ್ರ ನಿಂತಿದ್ದ ಭಾಗದ ಮೇಲೆ 15 ಮೀ. ಅಗಲ, 25 ಮೀ. ಆಳದ ಬಾವಿ ತೋಡಿ ಅದರ ಮೂಲಕ ಹಾಳಾಗಿದ್ದ ಕಟ್ಟರ್ ಹೆಡ್ ಹೊರತೆಗೆದು, ಹೊಸ ಕಟ್ಟರ್ ಹೆಡ್ ಜೋಡಿಸಿದ್ದರು. 2015ರ ಸೆಪ್ಟೆಂಬರ್‌ನಿಂದ ಗೋದಾವರಿ ಮತ್ತೆ ಕೆಲಸ ಆರಂಭಿಸಿತ್ತು. ಪ್ರತಿದಿನ ಸರಾಸರಿ 10 ಮೀ. ಸುರಂಗ ಕೊರೆದು ಕೆಲಸ ಪೂರ್ಣಗೊಳಿಸಿದೆ.