ಬೆಂಗಳೂರು: ಬಹಳ ದಿನಗಳ ನಂತರ ಮತ್ತೆ ಕಾರ್ಯಾಚರಣೆಗಿಳಿದಿರುವ ಲೋಕಾಯುಕ್ತ ಪೊಲೀಸರು, ಅಕ್ರಮ ಹೊರ್ಡಿಂಗ್ಸ್ ಪ್ರಕರಣ ಸಂಬಂಧ ಶನಿವಾರ 10 ಜಾಹೀರಾತು ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ.
ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಕೆ ಮಥಾಯಿ ಅವರು ನೀಡಿದ್ದ ವರದಿಯನ್ನು ಆಧರಿಸಿ ಕಳೆದ ವರ್ಷ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸುಮಾರು 3 ಸಾವಿರಕ್ಕೂ ಹೆಚ್ಚು ಅಕ್ರಮ ಹೊರ್ಡಿಂಗ್ ಗಳಿಂದಾಗಿ ಬಿಬಿಎಂಪಿ ಸುಮಾರು 2 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ ಎಂದು ಮಥಾಯಿ ಅವರು ತಮ್ಮ ವರದಿಯಲ್ಲಿ ತಿಳಿಸಿದ್ದರು.
ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಪ್ರಕಾಶ್ ಆರ್ಟ್ಸ್ ಪ್ರೈವೆಟ್ ಲಿಮಿಟೆಡ್, ಫ್ರೇಸರ್ ಟೌನ್ ನಲ್ಲಿರುವ ಸ್ಪಾರ್ಕ್ ಅಡ್ವರ್ ಟೈಸಿಂಗ್, ಎಂ.ಜಿ.ರಸ್ತೆಯಲ್ಲಿರುವ ಔಟ್ ಡೂರ್ ಮೀಡಿಯಾ, ಸಿವಿ ರಾಮನ್ ನಗರದಲ್ಲಿರುವ ಪಿಆರ್ ಒ ಆಡ್ಸ್, ಲಾಲ್ಬಾಗ್ ರಸ್ತೆಯಲ್ಲಿರುವ ಪಾಪೂಲರ್ ಅಡ್ವರ್ಟೈಸರ್ಸ್ ಹಾಗೂ ಪೂರ್ವ ಆಡ್ವರ್ಟೈಸಿಂಗ್ ಸೇರಿದಂತೆ 10 ಜಾಹೀರಾತು ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ವೇಳೆ ಹಲವು ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಸುಮಾರು 300 ಲೈಸನ್ಸ್ ಗಳನ್ನು ನಕಲಿ ಮಾಡಿದ್ದು, ಇದರಿಂದ ಬಿಬಿಎಂಪಿ 1,200 ಕೋಟಿ ರುಪಾಯಿ ನಷ್ಟವಾಗಿರುವುದು ಪತ್ತೆಯಾಗಿದೆ ಎಂದಿದ್ದಾರೆ. ಅಲ್ಲದೆ ಜಾಹೀರಾತು ಸಂಸ್ಥೆಗಳು ಅನುಮತಿ ಪಡೆದಿದ್ದಕ್ಕಿಂತಲೂ ಹೆಚ್ಚು ವಿಸ್ತಿರ್ಣದಲ್ಲಿ ಹೊರ್ಡಿಂಗ್ಸ್ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.