ಚಿತ್ರದುರ್ಗ; ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾದ ಪರಿಣಾಮ ಚಿತ್ರದುರ್ಗ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಅವರ ಪುತ್ರ ಅಭಿಷೇಕ್ (23) ಮೃತಪಟ್ಟ ಘಟನೆ ಕಳೆದ ರಾತ್ರಿ ಹೊಸಕೋಟೆ-ಕೋಲಾರ ಹೆದ್ದಾರಿ ಅಟ್ಟೂರು ಬಳಿ ನಡೆದಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಇನ್ನು ನಾಲ್ವರಿಗೆ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ಹಾಸ್ ಮಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಅಭಿಷೇಕ್ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ. ತಮ್ಮ ಸ್ನೇಹಿತರಾದ ಅಭಿಷೇಕ್ , ಪೂಜಾ, ಅನು, ಸುಮುಖ್ ಮತ್ತು ದ್ರುಪದ್ ಜೊತೆ ಸ್ನೇಹಿತೆಯ ಹುಟ್ಟು ಹಬ್ಬ ಆಚರಣೆ ಮಾಡಲು ಹೋಗಿದ್ದರು.
ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಮರಳಿ ಬರುವಾಗ, ಫೋರ್ಡ್ ಫಿಗೋ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಘಟನೆ ಸಂಭವಿಸಿದೆ. ಹೊಸಕೋಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತಿ ವೇಗವಾಗಿ ಸಚಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.