ಹುಬ್ಬಳ್ಳಿ: ಪರಿಸರ ಪ್ರೇಮಿಗಳ ಸ್ವರ್ಗ ಹಾಗೂ ಹಸಿರು ವನ-ವನ್ಯಜೀವಿಗಳ ತಾಣವಾಗಿರುವ ದಾಂಡೇಲಿ ಇದೀಗ ಅತ್ಯುತ್ತಮ ಪರಿಸರ ಪ್ರೇಮಿ ಪ್ರವಾಸಿ ತಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹುಲಿ ಸಂರಕ್ಷಿತ ಪ್ರದೇಶವೆಂದೇ ಖ್ಯಾತಿಗೊಂಡಿರುವ ದಾಂಡೇಲಿ, ಪ್ರವಾಸಿಗರ ಹಾಗೂ ಪರಿಸರ ಪ್ರೇಮಿಗಳ ಸ್ವರ್ಗ ತಾಣವಾಗಿದೆ. ಹುಡುಕಿದಷ್ಟು ಸಿಗುವ ಚಾರಣ ದಾರಿಗಳು, ವನ್ಯಜೀವಿಗಳು, ಪಕ್ಷಿಗಳು ಹೀಗೆ ಪ್ರಕೃತಿ ಸದೃಶಗಳನ್ನು ತನ್ನಲ್ಲಿ ಹುದುಕಿಸಿಕೊಂಡಿರುವ ದಾಂಡೇಲಿ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.
ಇದೀಗ ಈ ವನ್ಯಜೀವಿ ಧಾಮಕ್ಕೆ ಸೋಮವಾರ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಎಫ್ ಕೆಸಿಸಿಐ ಪರಿಸರ ಪ್ರೇಮಿ ಪ್ರವಾಸಿ ತಾಣವೆಂಬ ಕಿರೀಟ ತೊಡಿಸಲು ನಿರ್ಧಾರ ಕೈಗೊಂಡಿದೆ.
ಈ ಕುರಿತಂತೆ ಮಾತನಾಡಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶ ಕೆ. ಶ್ರೀನಿವಾಸುಲು ಅವರು, ದಾಂಡೇಲಿಯಲ್ಲಿ ವಿವಿಧ ರೀತಿಯ ಪ್ಯಾಕೇಜ್ ಗಳನ್ನು ನೀಡುತ್ತಿರುವುದರಿಂದ ಕಳೆದೆರಡು ವರ್ಷಗಳಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಬಂದಿದೆ. ಪ್ರಸಿದ್ಧಿ ಪಡೆದಿರುವ ಕುಲ್ಗಿ ನೇಚರ್ ಕ್ಯಾಂಪ್, ಅನಾಶಿ ಮತ್ತು ಕ್ಯಾಸಲ್ ರಾಕ್ ಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೆ ಅತ್ತಿವೇರಿ ಎಂಬ ಪಕ್ಷಿಧಾಮವನ್ನು ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇದೂ ಕೂಡ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದರಂತೆ ಹೊಸ ಅರಣ್ಯ ಕ್ಯಾಂಪ್ ವೊಂದನ್ನು ಪ್ರವಾಸಿಗರಿಗೆ ನೀಡಲಾಗಿದ್ದು. 108 ಕಿ.ಮೀ ನಷ್ಟು ಗ್ರೇಟ್ ಕೆನೆರಾ ಟ್ರೇಲ್ ಟ್ರೆಕ್ಕಿಂಗ್ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಕಾರ್ಯ ಪ್ರಗತಿಯಲ್ಲಿದೆ. ಕೆಲಸ ಮುಗಿದ ಕೂಡಲೇ ಟ್ರಿಕ್ಕಿಂಗ್ ಗೆ ಬರುವ ಪ್ರವಾಸಿಗರಿಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.