ಪ್ರತಿವರ್ಷ ಮಾರ್ಚ್ ಮೊದಲನೆಯ ವಾರದಲ್ಲಿ ಜಾಗತಿಕವಾಗಿ ಆಚರಿಸಲ್ಪಡುವ ‘ಜಾಗತಿಕ ಗ್ಲಾಕೋಮಾ ಸಪ್ತಾಹ’ದ ಅಂಗವಾಗಿ ನಾರಾಯಣ ನೇತ್ರಾಲಯವು ಬೆಂಗಳೂರಿನ ತನ್ನ ಎಲ್ಲ 4 ಕೇಂದ್ರಗಳಲ್ಲಿ ಜನರಲ್ಲಿ ಕಣ್ಣಿನಲ್ಲಿ ಕಾಣಿಸಿಕೊಳ್ಳಬಹುದಾದ ಗ್ಲಾಕೋಮಾ ರೋಗದ ಕುರಿತು ಜಾಗೃತಿ ಮೂಡಿಸುವ ಬಹುವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಾಗತಿಕ ಗ್ಲಾಕೋಮಾ ಸಪ್ತಾಹವು ಎಲ್ಲ ರಾಷ್ಟ್ರೀಯ ಗ್ಲಾಕೋಮಾ ಸೋಸೈಟಿಗಳನ್ನು ಒಳಗೊಂಡ (ಉದಾಹರಣೆಗೆ, ಭಾರತದ ಗ್ಲಾಕೋಮಾ ಸೊಸೈಟಿ ಆಫ್ ಇಂಡಿಯಾ), ಜಾಗತಿಕ ಗ್ಲಾಕೋಮಾ ಸಂಘಟನೆ (WGA) ಹಾಗೂ ವಲ್ರ್ಡ್ ಗ್ಲಾಕೋಮಾ ಪೇಶಂಟ್ ಅಸೋಸಿಯೇಶನ್ (WGPA)ಗಳ ಸಹಯೋಗದಲ್ಲಿ ಜರುಗುತ್ತದೆ. ಕಳೆದ 8 ವರ್ಷಗಳಿಂದಲೂ ಆಚರಿಸಿಕೊಂಡು ಬರಲಾಗುತ್ತಿರುವ ಈ ಅಭಿಯಾನಕ್ಕೆ ಅಭೂತಪೂರ್ವ ಜನಬೆಂಬಲ ದೊರೆತಿದೆ.
ಈ ಕುರಿತ ಜನಜಾಗೃತಿ ಅಭಿಯಾನದ ಅಂಗವಾಗಿ, ಇಂದು, ಮಾರ್ಚ್ 6 ರಂದು ಸಾಯಂಕಾಲ 6 ರಿಂದ 7 ಗಂಟೆಯವರೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ನಾರಾಯಣ ನೇತ್ರಾಲಯದ ಶಾಖೆಯಿಂದ ಆರಂಭವಾಗಿ ರಾಯಲ್ ಮೀನಾಕ್ಷಿ ಮಾಲ್ ವರೆಗೆ ನಡೆದ ದೀಪದ ನಡಿಗೆ (ಕ್ಯಾಂಡಲ್ ಲೈಟ್ ವಾಕ್)ಯನ್ನು ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಶ್ರೀ ಟಿ.ಎಸ್.ನಾಗಾಭರಣ ಹಾಗೂ ದಕ್ಷಿಣ ಭಾರತ ಸಿನಿಮಾ ರಂಗದ ಖ್ಯಾತ ಸಂಗೀತ ನಿರ್ದೇಶಕ ಶ್ರೀ.ವಿ.ಮನೋಹರ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ನಾಗಾಭರಣ ಅವರು, “ಗ್ಲಾಕೋಮಾ ಕಾಯಿಲೆಯು ಆರಂಭದ ಹಂತದಲ್ಲಿಯೇ ಪತ್ತೆಹಚ್ಚಲ್ಪಟ್ಟರೆ, ಕಣ್ಣು ಕುರುಡಾಗುವುದನ್ನು ತಪ್ಪಿಸಬಹುದು ಅಥವಾ ಕುರುಡುತನವನ್ನು ಮುಂದುಡಬಹುದು. ನಿಯಮಿತವಾಗಿ ಕಣ್ಣಿನ ತಪಾಸಣೆಯನ್ನು ಸಂಪೂರ್ಣವಾಗಿ ಮಾಡಿಸಿಕೊಳ್ಳುವುದು ಇಲ್ಲಿ ತುಂಬ ಪ್ರಮುಖವಾದ ಸಂಗತಿ. ಅದರಲ್ಲಿಯೂ ವಿಶೇಷವಾಗಿ, ಆನುವಂಶಿಕವಾಗಿ ಕಂಡುಬರಬಹುದಾದ ಗ್ಲಾಕೋಮಾದಂತಹ ಕಾಯಿಲೆಯ ಇತಿಹಾಸವನ್ನು ಹೊಂದಿರುವಂತವರು, ಅಧಿಕ ರಕ್ತದೊತ್ತಡ ಇರುವವರು, ಮಧುಮೇಹ ರೋಗಿಗಳು ಅಥವಾ ಕಣ್ಣಿಗೆ ಯಾವುದೇ ರೀತಿಯ ಗಾಯವಾಗಿರುವವರು ಸಂಪೂರ್ಣ ನೇತ್ರಚಿಕಿತ್ಸೆಗೆ ನಿಯಮಿತವಾಗಿ ಒಳಪಡುತ್ತಲೇ ಇರಬೇಕಾದದ್ದು ಅಗತ್ಯವಾಗಿದೆ”, ಎಂದು ಹೇಳಿದರು.
“ಗ್ಲಾಕೋಮಾ ಗೊತ್ತಾಗದಂತೆ ದೃಷ್ಟಿಯನ್ನು ಲಪಟಾಯಿಸುವ ಕಳ್ಳರೋಗ ಎಂದೇ ಗುರುತಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಪ್ರಕಾರ ಈ ಕಾಯಿಲೆಯು ಜನರಲ್ಲಿ ಅಂಧತ್ವವನ್ನು ಉಂಟುಮಾಡುವಲ್ಲಿ ಜಾಗತಿಕವಾಗಿ ಎರಡನೆಯ ಸ್ಥಾನದಲ್ಲಿದೆ. 2020ರ ಹೊತ್ತಿಗೆ ಸುಮಾರು 11.1 ಮಿಲಿಯನ್ ಜನರು ಗ್ಲಾಕೋಮಾ ಕಾಯಿಲೆಯಿಂದ ಪೀಡಿತರಾಗಲಿದ್ದು ಜಾಗತಿಕ ಮಟ್ಟದಲ್ಲಿ ಈ ಕಾರಣದಿಂದ ಅಂಧರಾಗುವವರ ಸಂಖ್ಯೆ ಸುಮಾರು 12% ಎಂದು ಅಂದಾಜಿಸಲಾಗಿದೆ. ರೋಗಬರದಂತೆ ತಡೆಯುವ ಹಾಗೂ ಸೂಕ್ತ ಚಿಕಿತ್ಸೆಗೊಳಪಡಿಸುವ ವ್ಯವಸ್ಥೆಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಆರಂಭ ಹಂತದಲ್ಲಿಯೇ ರೋಗಪತ್ತೆ ಮಾಡುವುದು ಹಾಗೂ ವ್ಯವಸ್ಥಾಪನೆ ಮಾಡುವದು ಪ್ರಮುಖ ಅಂಶವಾಗಿರುತ್ತದೆ”, ಎಂದು ಬೆಂಗಳೂರಿನ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟರು.
“ಜಾಗತಿಕ ಗ್ಲಾಕೋಮಾ ಸಪ್ತಾಹ”ದ ಅಂಗವಾಗಿ ನಾರಾಯಣ ನೇತ್ರಾಲಯದ ಎಲ್ಲಾ 4 ಕೇಂದ್ರಗಳಲ್ಲಿ ಮಾರ್ಚ್ 7 ರಿಂದ 11 ರವರೆಗೆ, ಈ ರೋಗದಿಂದ ಬಳಲುತ್ತಿರುವವರ ರಕ್ತಸಂಬಂಧಿಗಳಿಗಾಗಿ ಪ್ರಾಥಮಿಕ ಕಣ್ಣಿನ ತಪಾಸಣೆಯನ್ನು ಸಂಪೂರ್ಣ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ.
ಗ್ಲಾಕೋಮಾ ಕಾಯಿಲೆಯ ಕುರಿತಾಗಿ ಜನರಲ್ಲಿ ಅರಿವನ್ನು ಮೂಡಿಸುವುದು ಈ ಕ್ಷಣದ ತುರ್ತಾಗಿದೆ. ಜನರಿಗೆ ಕುರಿತ ಅರಿವು ಉಂಟಾದರೆ, ಕಾಯಿಲೆಯನ್ನು ಆರಂಭದ ಹಂತದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಲು ಅನುಕೂಲಕರವಾಗುತ್ತದೆ ಹಾಗೂ ರೋಗದ ಆರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ದೊರೆಯುವುದರಿಂದ ಕುರುಡುತನವನ್ನು ತಪ್ಪಿಸಬಹುದು ಎಂದು ರಾಜಾಜಿ ನಗರ ನಾರಾಯಣ ನೇತ್ರಾಲಯ ಶಾಖೆಯ ಗ್ಲಾಕೋಮಾ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಸಥಿ ದೇವಿ ಹೇಳಿದರು.
ಗ್ಲಾಕೋಮಾ ಕಾಯಿಲೆಯು ನಿಮ್ಮ ದೃಷ್ಟಿಯನ್ನು ಕದಿಯದಂತೆ ನೋಡಿಕೊಳ್ಳಿ. ಆರಂಭಿಕ ಹಂತದಲ್ಲಿಯೇ ಇದರ ಪತ್ತೆಗಾಗಿ ನಿಯಮಿತವಾಗಿ ಕಣ್ಣಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುತ್ತಲಿರಿ. ಕಣ್ಣು ಕುರುಡಾಗುವುದನ್ನು ತಪ್ಪಿಸಿಕೊಳ್ಳಿ ಎಂಬ ಸಂದೇಶವನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ನಾರಾಯಣ ನೇತ್ರಾಲಯದ ಶಾಖೆಯ ಗ್ಲಾಕೋಮಾ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಹರ್ಷ ಅವರು ನೀಡಿದರು.
“ಗ್ಲಾಕೋಮಾ ನಿಮ್ಮಲ್ಲಿ ಅಂಧತ್ವವನ್ನೇ ಉಂಟುಮಾಡಬಹುದಾದ ಕಾಯಿಲೆ ಎಂಬುದನ್ನು ನೆನಪಿಡಿ. ಒಂದೊಮ್ಮೆ ನಿಮಗೆ ಗ್ಲಾಕೋಮಾ ಕಾಯಿಲೆಯಿದೆ ಎಂದು ಪತ್ತೆಹಚ್ಚಲ್ಪಟ್ಟರೆ, ನೀವು ಜೀವನ ಪರ್ಯಂತ ಚಿಕಿತ್ಸೆಯನ್ನು ಪಡೆಯಬೇಕಾದದ್ದು ಮುಖ್ಯವಾಗಿರುತ್ತದೆ. ನಿಯಮಿತ ಚಿಕಿತ್ಸೆಯು ಗ್ಲಾಕೋಮಾ ಕಾಯಿಲೆ ಉಲ್ಬಣಗೊಳ್ಳುವುದನ್ನು ತಡೆಹಿಡಿದು ಸಂಭವಿಸುವ ಹಾನಿಯನ್ನು ತಪ್ಪಿಸಿ ನಿಮ್ಮ ದೃಷ್ಟಿಯನ್ನು ರಕ್ಷಿಸುತ್ತದೆ”, ಎಂದು ಖ್ಯಾತ ಸಂಗೀತ ನಿರ್ದೇಶಕರಾದ ವಿ.ಮನೋಹರ್ ಅವರು ಈ ಸಂದರ್ಭದಲ್ಲಿ ಹೇಳಿದರು.
“ನಿಮ್ಮಲ್ಲಿ ಉಂಟಾಗಿರುವ ಎಲ್ಲ ಸಂದೇಹಗಳು ಮತ್ತು ಪ್ರಶ್ನೆಗಳನ್ನು ನಿಮ್ಮ ನೇತ್ರತಜ್ಞರಲ್ಲಿ ಕೇಳಿ ಪರಿಹರಿಸಿಕೊಳ್ಳಿ. ಗ್ಲಾಕೋಮಾ ಕಾಯಿಲೆಯ ಕುರಿತು ತಿಳಿದುಕೊಂಡಿರುವುದು ರೋಗವನ್ನು ನಿಭಾಯಿಸಲು ಸಹಾಯ ಮಾಡುತ್ತದೆ”, ಎಂದು ಡಾ. ಸಥಿ ದೇವಿ ಅವರು ಹೇಳಿದರು.