ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನೀರು ಬಿಟ್ಟ ರಾಜ್ಯಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವಂತೆಯೇ, ಬಂದ್ ನಿಂದ ಸುಪ್ರೀಂ ಕೋರ್ಟ್ ತೀರ್ಪು ಬದಲಿಸಲು ಸಾಧ್ಯವಿಲ್ಲ ಎಂದು ನೀರಾವರಿ ಸಚಿವ ಎಂಬಿ ಪಾಟಿಲ್ ಹೇಳಿದ್ದಾರೆ.
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಬಂದ್ ನಿಂದಾಗಿ ನ್ಯಾಯಾಲಯದ ಅದೇಶ ಬದಲಿಸಲು ಸಾಧ್ಯವಿಲ್ಲ. ಬಂದ್ ನಿಂದಾಗಿ ರಾಜ್ಯಕ್ಕೇ ತೊಂದರೆಯಾಗುತ್ತದೆ. ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದರೆ ರಾಜ್ಯದ ರೈತರು ಶಾಂತ ರೀತಿಯಿಂದ ಪ್ರತಿಭಟನೆ ಮಾಡಬೇಕು. ಆದರೆ, ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಆಸ್ತಿ-ಪಾಸ್ತಿಗೆ ಹಾನಿಯಾಗದಂತೆ ಶಾಂತ ರೀತಿಯಿಂದ ವರ್ತಿಸಬೇಕು ಎಂದು ಅವರು ಹೇಳಿದರು.
ಇದೇ ವೇಳೆ ತಮಿಳುನಾಡು ಸರ್ಕಾರ ಮತ್ತೆ 61 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಾಡಿನ ಜನರ ಭಾವನೆಗಳನ್ನು ರಾಜ್ಯ ಸರ್ಕಾರ ಪರಿಗಣಿಸುತ್ತದೆ. ರಾಜ್ಯದ ಜನರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಈಗ ತುಂಬ ಕಷ್ಟದಿಂದ ನೀರು ಬಿಡಲಾಗುತ್ತಿದೆ. ಇನ್ನೂ ಹೆಚ್ಚಿನ ನೀರು ಕೇಳಿದರೆ ಕಾವೇರಿ ಮೇಲುಸ್ತುವಾರಿ ಸಮಿತಿಯೇ ನೀರು ಬಿಡಲಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
"ನಮ್ಮ ರೈತರಿಗೆ ಕನಿಷ್ಠ ಒಂದು ಬೆಳೆಗಾದರೂ ನೀರು ಬೇಕು. ಕಾವೇರಿ ನ್ಯಾಯಾಧಿಕರಣದ ಮೂಲ ಆದೇಶದ ಬಗ್ಗೆ ನಮ್ಮ ಆಕ್ಷೇಪವಿದ್ದು, ಪ್ರತಿ ತಿಂಗಳು ನೀರು ಬಿಡಲು ನಿಗದಿಪಡಿಸಿರುವ ಪ್ರಮಾಣ ಸರಿಯಾದುದಲ್ಲ. ಪ್ರತಿ ವರ್ಷವೂ ಎರಡೂ ರಾಜ್ಯಗಳ ವಸ್ತುಸ್ಥಿತಿ ಪರಿಶೀಲಿಸಿ ನೀರು ಬಿಡುವಂತಹ ವ್ಯವಸ್ಥೆಯಾಗಬೇಕು. ಸುಪ್ರೀಂ ಕೋರ್ಟ್‍ನಲ್ಲಿ ಮೂಲ ಅರ್ಜಿಯ ವಿಚಾರಣೆ ಅಕ್ಟೋಬರ್ 18 ಕ್ಕೆ ನಡೆಯಲಿದೆ. ಆಗ ರಾಜ್ಯ ಸರ್ಕಾರ ಎಲ್ಲ ಅಂಶಗಳನ್ನೂ ಪ್ರಶ್ನಿಸಲಿದೆ ಎಂದು ಪಾಟೀಲ್ ತಿಳಿಸಿದರು.