ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದ ವೇಳೆ ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಲಾಠಿ ಚಾರ್ಚ್ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದ ಮೇಲಿನಿಂದ ಕೆಳಗೆಬಿದ್ದಿದ್ದ ಕುಮಾರ್ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರನ ಸುಂಕದಕಟ್ಟೆ ಬಳಿಯಿರುವ ಶ್ರೀಗಂಧ ಜಿಮ್ ನ 3ನೇ ಕಟ್ಟಡದಿಂದ ಕೆಳಗೆ ಬಿದ್ದಿದ್ದ ತುಮಕೂರು ಜಿಲ್ಲೆಯ ಕುಣಿಗಲ್ ಮೂಲದವರಾದ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಕುಮಾರ್ ಗೆ ಬೆನ್ನುಮೂಳೆ ಹಾಗೂ ಕಾಲಿನ ಮೂಳೆ ಮುರಿತಗೊಂಡಿತ್ತು. ಈ ವೇಳೆ ಅವರನ್ನು ಶ್ರೀಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತ ಕುಮಾರ್ ಅವರಿಗೆ ಮದುವೆಯಾಗಿದ್ದು ಮಗುವೊಂದಿತ್ತು. ಇದೀಗ ಕುಮಾರ್ ಪತ್ನಿ 7 ತಿಂಗಳ ಗರ್ಭಿಣಿಯಾಗಿದ್ದು ಪತಿಯ ಸಾವಿನ ಸುದ್ದಿ ಬರಸಿಡಿಲಂತೆ ಬಂದೊದಗಿದೆ. ಕುಮಾರ್ ಮೃತಪಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಇನ್ನು ಕುಮಾರ್ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಕುಟುಂಬಸ್ಥರು ಕಿಡಿಕಾರಿದರು.