ಹಾವೇರಿ: ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ವಿಜಯಪುರ ಲೋಕಾಯುಕ್ತ ಎಸ್‌ಪಿ ಸ್ಥಳದಲ್ಲೇ ಸಾವನ್ನಪ್ಪಿ, 12 ಜನರು ಗಾಯಗೊಂಡಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.
ಲೋಕಾಯುಕ್ತ ಎಸ್ಪಿ ಎಂ.ಬಿ. ಪಾಟೀಲ್ ಬೆಳಗಾವಿಯಿಂದ ಬೆಂಗಳೂರಿಗೆ ಮೀಟಿಂಗ್‌ಗಾಗಿ ತೆರಳುತ್ತಿದ್ದಾಗ ಘಟನೆ ನಡೆದಿದೆ.
2016ರ ಜ. 21ರಂದು ವಿಜಯಪುರ ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಪಾಟೀಲ್ ಅವರು ಕಲಬುರಗಿ, ಬೀದರ್, ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರಭಾರ ಲೋಕಾಯುಕ್ತ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಇನ್ನೊಂದು ವರ್ಷದಲ್ಲಿ ನಿವೃತ್ತಿಯಾಗುವುದರಲ್ಲಿದ್ದರು.
ನಿಂತ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಮಧ್ಯೆ ಅಪಘಾತ ವೀಕ್ಷಿಸುತ್ತಿದ್ದ ಟಿಟಿ ವಾಹನಕ್ಕೆ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಟಿಟಿಯಲ್ಲಿದ್ದ 9 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.ಸ್ಥಳಕ್ಕೆ ಎಸ್ಪಿ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೇ ಸ್ಥಳದಲ್ಲಿ ಪದೇ ಪದೆ ಅಪಘಾತಗಳಾಗುತ್ತಿವೆ. ಇಲ್ಲಿ ಯಾವುದೇ ಮುನ್ಸೂಚನಾ ಫಲಕಗಳಿಲ್ಲದಿರುವುದು ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ. ಈ ಸ್ಥಳದಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವ ಮೂಲಕ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.