ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಗರಾಭಿವೃದ್ಧಿ ಇಲಾಖೆಯ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಬೆಂಗಳೂರು ನಗರ ವಿಭಾಗದ ಎಸಿಬಿ ಅಧಿಕಾರಿಗಳು ಯಡಿಯೂರಪ್ಪ ಹಾಗೂ ಅವರ ಅಧಿಕಾರಾವಧಿಯಲ್ಲಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಾಗಿದ್ದವರ ವಿರುದ್ಧ ಎಫ್ಐ ಆರ್ ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 7, 8, 13(1)(c)(d) and 13(2) ಹಾಗೂ ಐಪಿಸಿ ಸೆಕ್ಷನ್ 406, 420 and 120(B) ಅಡಿಯಲ್ಲಿ ಖಾಸಗಿ ದೂರನ್ನು ಆಧರಿಸಿ 2 ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನಲ್ಲಿ ಡಾ. ಶಿವರಾಮ ಕಾರಂತ ಲೇಔಟ್ ಗಾಗಿ ವಶಪಡಿಸಿಕೊಳ್ಳಲಾಗಿದ್ದ 250 ಎಕರೆಯಷ್ಟು ಭೂಮಿಯನ್ನು ಡಿನೋಟಿಫೈ ಮಾಡಲು 2009-12 ರ ಅವಧಿಯಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ 20 ಆದೇಶ ಹೊರಡಿಸಿದ್ದರು ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.