ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ವರ್ಷ ಫೆಬ್ರವರಿಯಿಂದ ಪ್ರತಿ ತಿಂಗಳ ಎರಡನೇ ಭಾನುವಾರ ಬೆಂಗಳೂರಿನಲ್ಲಿ ‘ವಾಹನ ವಿರಳ ಸಂಚಾರ ದಿನ’ವಾಗಿ(ಲೆಸ್ ಟ್ರಾಫಿಕ್ ಡೇ) ಆಚರಿಸಲು ನಿರ್ಧರಿಸಿದ್ದು, ಅಂದು ವೊಲ್ವೊ ಬಸ್ ಸೇರಿದಂತೆ ಎಲ್ಲಾ ಬಿಎಂಟಿಸಿ ಬಸ್ ಮತ್ತು ಮೆಟ್ರೊ ಪ್ರಯಾಣ ದರ ಕಡಿಮೆ ಮಾಡುವ ಸಾಧ್ಯತೆ ಇದೆ.
ನಗರದ ಪರಿಸರ ರಕ್ಷಣೆ ಮತ್ತು ಸಾರ್ವಜನಿಕ ಸಾರಿಗೆ ಉತ್ತೇಜಿಸುವುದಕ್ಕಾಗಿ ಪ್ರತಿ ತಿಂಗಳು ಎರಡನೇ ಭಾನುವಾರ ಬಿಎಂಟಿಸಿ ಬಸ್ ಗಳ ಟಿಕೆಟ್ ಮತ್ತು ದೈನಿಂದ ಪಾಸ್ ದರ ಹಾಗೂ ನಮ್ಮ ಮೆಟ್ರೊ ಪ್ರಯಾಣ ದರವನ್ನು ಕಡಿಮೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಅವರು ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೇವಣ್ಣ ಅವರು, ವಾಹನ ವಿರಳ ಸಂಚಾರ ದಿನದಂದು ಬಿಎಂಟಿಸಿ ಹಾಗೂ ಮೊಟ್ರೊ ಪ್ರಯಾಣ ದರ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಎಷ್ಟು ಕಡಿಮೆ ಮಾಡಬೇಕು ಎಂಬುದನ್ನು ಚರ್ಚಿಸಲಾಗುತ್ತದೆ. ಅದೇ ರೀತಿ ಮೆಟ್ರೊ ರೈಲು ಪ್ರಯಾಣ ದರವನ್ನೂ ಇಳಿಸುವಂತೆ ನಿಗಮದ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು 72 ಲಕ್ಷ ವಾಹನಗಳಿವೆ. ಆ ಪೈಕಿ 65 ಲಕ್ಷ ವಾಹನಗಳು ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡರೆ ಸಾಕಷ್ಟು ಪರಿಸರ ಮತ್ತು ಇಂಧನ ಉಳಿತಾಯ ಆಗುತ್ತದೆ. ಆದರೆ, ಆಟೊ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ನಂತಹ ವಾಹನಗಳಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಾರ್ವಜನಿಕರು ಎರಡನೇ ಭಾನುವಾರ ಸ್ವಂತ ವಾಹನ ಹೊರಗೆ ತೆಗೆಯಬಾರದು ಎಂದು ಕಾನೂನು ಮಾಡಲು ಸಾಧ್ಯವಿಲ್ಲ. ಇಂತಹ ಕಾನೂನು ತಂದರೆ ಅದು ನ್ಯಾಯಾಲಯಗಳಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಜಾಗೃತಿಯ ಮೂಲಕವೇ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದ್ದಾರೆ.