ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಸುಮಾರು 10 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ನಾಲಾ ಯೋಜನೆ ಕುರಿತು ಸಂಧಾನ ಮಾತುಕತೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಮಹದಾಯಿ ವಿವಾದ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಂಧಾನ ಮಾತುಕತೆ ಮೂಲಕ ವಿವಾದ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಮೊದಲು ಎರಡು ಬಾರಿ ಸಭೆ ನಿಗದಿಯಾಗಿತ್ತಾದರೂ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ಸಂಧಾನ ಮಾತುಕತೆಗೆ ಸಹಕರಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ದೇವೇಂದ್ರ ಫಡ್ನವಿಸ್ ಅವರು ಚರ್ಚೆಗೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದರು.
ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಪತ್ರದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, "ಸಿದ್ದರಾಮಯ್ಯ ಅವರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಮಹದಾಯಿ ವಿವಾದವನ್ನು ಗೋವಾ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳು ಒಟ್ಟಿಗೆ ಕುಳಿತು ಬಗೆಹರಿಸಿಕೊಳ್ಳಬೇಕೆಂಬ ಅಭಿಪ್ರಾಯಕ್ಕೆ ನಮ್ಮ ಸಹಮತವಿದೆ. ಮೂರು ರಾಜ್ಯದ ಮುಖ್ಯಸ್ಥರು ಒಂದೇ ವೇದಿಕೆಯಲ್ಲಿ ಕುಳಿತು ಪರಸ್ಪರ ಸೌಹಾರ್ದತೆಯಿಂದ ಮಾತುಕತೆ ನಡೆಸಿದರೆ ವಿವಾದ ಇತ್ಯರ್ಥವಾಗುವ ವಿಶ್ವಾಸವಿದೆ ಎಂದು ಫಡ್ನವೀಸ್ ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ವಿವಾದ ಇತ್ಯರ್ಥಕ್ಕೆ ಅಗತ್ಯವಾದ ಎಲ್ಲಾ ಸಹಕಾರವನ್ನು ನೀಡಲು ತಾನು ಬದ್ಧರಿರುವುದಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಭರವಸೆ ನೀಡಿದ್ದು, ಗೋವಾ ಸಿಎಂ ಜೊತೆ ಚರ್ಚಿಸಿ ಸಭೆಯ ದಿನಾಂಕವನ್ನು ನಿಗದಿ ಮಾಡುವಂತೆ ಸಲಹೆ ನೀಡಿದ್ದಾರೆ.
ಇದನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಸಭೆ ನಡೆಸಲು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಸಂಧಾನ ಸಭೆಗೆ ಮಹಾರಾಷ್ಟ್ರ ಸಿಎಂ ಒಪ್ಪಿದ್ದಾರೆ. ನಿಮಗೆ ಅನುಕೂಲವಾದ ದಿನದಂದು ಸಭೆ ನಡೆಸಲು ಸಮಯ ನಿಗದಿ ಮಾಡಿದರೆ ಅದಕ್ಕೆ ನಮ್ಮ ಸಹಮತವಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಕಳೆದ ಮೇ 30 ರಂದು ಈ ವಿಷಯವಾಗಿ ಸುದೀರ್ಘ ಪತ್ರ ಬರೆದಿದ್ದನ್ನು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಸಿಎಂ ಸಿದ್ದರಾಮಯ್ಯ ಇದೇ ವೇಳೆ ನೆನಪಿಸಿದ್ದಾರೆ ಎಂದು ತಿಳಿದುಬಂದಿದೆ.