ಬೆಂಗಳೂರು: ನೈಸ್ ರಸ್ತೆಯಲ್ಲಿ ಯುವತಿಯನ್ನು ನಿಲ್ಲಿಸಿ ವಾಹನ ಸವಾರರನ್ನು ಆಕರ್ಷಿಸಿ ಲೈಂಗಿಕ ಕ್ರಿಯೆ ನಡೆಸಲು ನಿರ್ಜನ ಪ್ರದೇಶಕ್ಕೆ ಕರೆತಂದು ನಂತರ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಸೇರಿ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈ ಗ್ಯಾಂಗ್ ಸುಮಾರು 25 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಮೋನಿಷಾ(20), ಸಾವಾನ್ ಅಲಿಯಾಸ್ ಬಬ್ಲು, ಮುತ್ತುರಾಜ್, ಪುನೀತ್ ಅಲಿಯಾಸ್ ಕಾಡಿ, ತುಳಸಿರಾಮ್, ಅರುಣ್ ಏಸುರಾಜ್, ಸ್ಟೀಫನ್ ರಾಜ್ ಅಲಿಯಾಸ್ ಮುಕುಡಿ, ವಿಗ್ನೇಶ್ ಅಲಿಯಾಸ್ ದೀಲಾ, ಅಮರ್, ಶಾಂತ್ ಕುಮಾರ್, ಕೇಶವಮೂರ್ತಿ, ಮತ್ತು ದೀಪಕ್ ಗಾರ್ಗ್ ಬಂಧಿತ ಆರೋಪಿಗಳು. ಇವರೆಲ್ಲಾ ತಮಿಳುನಾಡು ಹಾಗೂ ಕೇರಳ ಮತ್ತು ಬೆಂಗಳೂರು ನಗರದವರಾಗಿದ್ದಾರೆ.
ಪ್ರಮುಖ ಆರೋಪಿ ಸಾವನ್ ಅಲಿಯಾಸ್ ಬಬ್ಲು ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯಲ್ಲಿ ಮೊನಿಷಾಳನ್ನು ನಿಲ್ಲಿಸಿ ವಾಹನ ಸವಾರರನ್ನು ಸೆಳೆದು ಅವರಿಗೆ ಅನುಮಾನ ಬರದಂತೆ ರಸ್ತೆಯ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬರಲಾಗುತ್ತಿತ್ತು.
ಅಲ್ಲಿ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿರುತ್ತಿದ್ದ ಆರೋಪಿಗಳು ಅವರ ಬಳಿ ಇದ್ದ ಹಣ, ಚಿನ್ನಾಭರಣ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು.
ಈ ಗ್ಯಾಂಗ್ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಬಬ್ಲು ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆತನನ್ನು ಕರೆದು ವಿಚಾರಣೆ ನಡೆಸಿದಾಗ ತಮ್ಮ ವೃತ್ತಾಂತವನ್ನೆಲ್ಲಾ ಬಹಿರಂಗ ಪಡಿಸಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತವರ ಸಿಬ್ಬಂದಿ ಗ್ಯಾಂಗ್‌ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.