ಚಿಕ್ಕಮಗಳೂರು: ವಿವಾದಿತ ಪಿಎಫ್ಐ ಸಂಘಟನೆ ನಿಷೇಧ ಕುರಿತಂತೆ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಭಾನುವಾರ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯು.ಟಿ ಖಾದರ್ ಅವರು, ಯಾವ ಸಂಘಟನೆಗಳು ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುತ್ತದೆಯೋ ಆ ಎಲ್ಲಾ ಸಂಘಟನೆಗಳನ್ನು ನಿಷೇಧಿಸಬೇಕು. ಆದರೆ ರಾಷ್ಟ್ರೀಯ ಸಂಘಟನೆಗಳ ಇಂಟಲಿಜೆನ್ಸಿ ರಿಪೋರ್ಟ್ ಕೇಂದ್ರ ಸರ್ಕಾರದ ಬಳಿ ಇರುತ್ತದೆ. ಅದರ ಆಧಾರದ ಮೇಲೆ ಕೇಂದ್ರ ಸರ್ಕಾರವೇ ಇಂತಹ ಸಂಘಟನೆಗಳ ಕುರಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಇಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ..ನಮಗೆ ಶಾಂತಿ ಸೌಹಾರ್ದ ಮುಖ್ಯ ಎಂದು ಯು.ಟಿ. ಖಾದರ್ ತಿಳಿಸಿದರು ಎಂದು ವರದಿಯಾಗಿದೆ.
ಅಕ್ರಮ ಮತಾಂತರ ಸಂಬಂಧ ಖಾಸಗಿ ಸುದ್ದಿವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಪಿಎಫ್ ಐ ಸಂಘಟನೆಗೆ ಸೇರಿದವರೆನ್ನಲಾದ ಮಹಿಳೆಯೊಬ್ಬರು ಮತಾಂತರ ಕುರಿತ ರಹಸ್ಯ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದರು. ಈ ಸುದ್ದಿ ಅಂತರ್ಜಾಲದಲ್ಲಿ ಪ್ರಸಾರವಾದ ಬಳಿಕ ಪಿಎಫ್ ಐ ಸಂಘಟನೆಗಾಗಿ ಆಗ್ರಹಿಸುತ್ತಿದ್ದ ಬಿಜೆಪಿ ಆಗ್ರಹಕ್ಕೆ ಬಲ ಸಿಕ್ಕಂತಾಗಿದ್ದು, ಇದೀಗ ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರೂ ಕೂಡ ಪಿಎಫ್ ಐ ಸಂಘಟನೆ ನಿಷೇಧದತ್ತ ಒಲವು ತೋರಿಸುತ್ತಿದ್ದಾರೆ ಎನ್ನಲಾಗಿದೆ. ಇದೀಗ ಸಚಿವ ಯುಟಿ ಖಾದರ್ ಅವರ ಮಾತುಗಳು ಕೂಡ ಇದಕ್ಕೆ ಪುಷ್ಠಿ ನೀಡುತ್ತಿದೆ.
ಇನ್ನು ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಈ ಹಂತದಲ್ಲಿ ಒಂದು ಕೋಮಿಗೆ ಸೇರಿದ ಸಂಘಟನೆಯನ್ನು ನಿಷೇಧಿಸುವ ಮೂಲಕ ಆ ಕೋಮಿನ ವಿರೋಧ ಎದುರಿಸಬೇಕಾಗುತ್ತದೆ ಎಂಬ ಅಂಜಿಕೆ ಬಹುಶಃ ರಾಜ್ಯ ಸರ್ಕಾರಕ್ಕೆ ಇರಬಹುದು. ಹೀಗಾಗಿ ಸಂಘಟನೆ ಕುರಿತು ನಿರ್ಣಯವನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳಲಿ ಎಂದು ಚೆಂಡನ್ನು ಕೇಂದ್ರದ ಅಂಗಳಕ್ಕೆ ತಳ್ಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics