ಬೆಂಗಳೂರು: ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ(ಕೆಪಿಎಂಇ) ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟಿದ್ದು, ಸರ್ಕಾರದೊಂದಿಗಿನ ಸಂಧಾನ ಮಾತುಕತೆ ಮತ್ತೆ ವಿಫಲವಾದ ಹಿನ್ನಲೆಯಲ್ಲಿ ಇಂದಿನಿಂದ ಒಪಿಡಿ (ಹೊರ ರೋಗಿಗಳ ವಿಭಾಗ) ಬಂದ್ ಮಾಡಲು ನಿರ್ಧರಿಸಲಾಗಿದೆ.
ದಿನೇ ದಿನೇ ವೈದ್ಯರ ಮುಷ್ಕರ ಗಂಭೀರ ಸ್ವರೂಪ ಪಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಖಾಸಗಿ ವೈದ್ಯರ ಸಂಘದ ನಡುವೆ ಬುಧವಾರ ನಡೆದ ಮಾತುಕತೆ ವಿಫಲವಾಗಿದೆ. ಹೀಗಾಗಿ ಗುರುವಾರದಿಂದ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ ಬಂದ್ ಮಾಡಲು ನಿರ್ಧರಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಸಂಘದ ಪದಾಧಿಕಾರಿಗಳ ನಡುವೆ ಬೆಳಗಾವಿಯಲ್ಲಿ ಮಾತುಕತೆ ನಡೆದಿದ್ದು, ವಿಧೇಯಕದಲ್ಲಿ ಕೆಲವು ಮಾರ್ಪಾಡು ಮಾಡುವಂತೆ ವೈದ್ಯರ ಸಂಘ ಪಟ್ಟು ಹಿಡಿದಿದೆ. ಇದಕ್ಕೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್ ಮಾಡುವ ನಿರ್ಧಾರ ಪ್ರಕಟಿಸಿದವು.
ಆದರೆ, ತುರ್ತು ಸೇವೆ ಹಾಗೂ ಒಳರೋಗಿ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ. ಈ ನಡುವೆ, ಸರಕಾರ ಮತ್ತು ಖಾಸಗಿ ವೈದ್ಯರ ಸಂಘದ ಜಟಾಪಟಿಯ ನಡುವೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಬುಧವಾರ ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೂರು ದಿನಗಳಲ್ಲಿ 18 ಮಂದಿ ಪ್ರಾಣ ಕಳೆದುಕೊಂಡಂತಾಗಿದೆ.
ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಬೆಳಗಾವಿಯಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲು ಖಾಸಗಿ ವೈದ್ಯರ ಒಕ್ಕೂಟ ನಿರ್ಧರಿಸಿದ್ದು, ಇಲ್ಲಿ ಮುಂದಿನ ನಡೆ ನಿರ್ಧಾರವಾಗಲಿದೆ. ಪ್ರತಿಭಟನೆ ಒಂದು ದಿನಕ್ಕೆ ನಿಗದಿಯಾಗಿದ್ದರೂ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗದಿದ್ದರೆ ಶುಕ್ರವಾರವೂ ಒಪಿಡಿ ಬಂದ್ ಮುಂದುವರಿಯುವ ಸಾಧ್ಯತೆ ಇದೆ.
ಸರ್ಕಾರಿ ವೈದ್ಯರಿಗೆ ರಜೆ ಮುಂದೂಡಿಕೆ
ಇದೇ ವೇಳೆ ಖಾಸಗಿ ವೈದ್ಯರು ಮುಷ್ಕರದಲ್ಲಿ ತೊಡಗಿರುವ ಹಿನ್ನಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರ ರಜೆಗಳನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾ, ತಾಲೂಕು ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ರಜೆ ಹಾಕದೆ ಕರ್ತವ್ಯಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ವೈದ್ಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೂ ಸೇವೆ ನೀಡಲು ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics