ಮಕ್ಕಳ ಹಕ್ಕು ಮರೆತ ಜನಪ್ರತಿನಿಧಿಗಳು: ಸಂಸತದಿಂದ ಬಂದ ಮಕ್ಕಳನ್ನು ಸ್ವಾಗತಿಸಿದ ಖಾಲಿ ಕುರ್ಚಿಗಳು
ಬೆಂಗಳೂರು: ಮಕ್ಕಳ ಹಕ್ಕು, ರಕ್ಷಣೆ ಹಾಗೂ ಅಭಿವೃದ್ಧಿ ಹೊಂದುವ ವಿವಿಧ ಹಕ್ಕುಗಳ ಕುರಿತಂತೆ ಚರ್ಚೆ ನಡೆಸಲಾಗುವ ಮಕ್ಕಳ ಹಕ್ಕು ಸಂಸತ್ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ನೀರತ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಅಧಿವೇಶನದಲ್ಲಿ ಭಾಗಿಯಾಗುವ ಸಲುವಾಗಿ ಸಂತಸದಿಂದ ಬಂದ ಮಕ್ಕಳು ಜನಪ್ರತಿನಿಧಿಗಳಿಗಾಗಿ ಗಂಟೆಗಟ್ಟಲೆ ಕಾದು ಸುಸ್ತಾಗಿ ತಮ್ಮ ತಮ್ಮ ಮನೆಗಳಿಗೆ ವಾಪಸ್ಸಾದರು.
ವಿಧಾನಸೌಧದಲ್ಲಿ ಮಂಗಳವಾರ ಮಕ್ಕಳ ಹಕ್ಕು ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿವಿಧ ಶಾಲೆಗಳಿಂದ ಮಕ್ಕಳು ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಉತ್ಸುಕರಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ 300 ಜನಪ್ರತಿನಿಧಿಗಳು ಪಾಲ್ಗೊಳ್ಳಬೇಕಿತ್ತು. ಆದರೆ, ಕೇವಲ 4 ಮಂದಿ ಶಾಸಕರು ಮಾತ್ರ ಹಾಜರಿದ್ದರು. ಇದರಿಂದಾಗಿ ಜನಪ್ರತಿನಿಧಿಗಳ ಆಗಮನಕ್ಕಾಗಿ ಮಕ್ಕಳು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಗಂಟೆಗಟ್ಟಲೆ ಕಾದರೂ ಶಾಸಕರು ಬಾರದ ಹಿನ್ನಲೆಯಲ್ಲಿ ಸಪ್ಪೆಮೋರೆ ಹೊತ್ತು ಮಕ್ಕಳು ವಾಪಸ್ಸಾದರು.
ನಮ್ಮ ವಿಚಾರಗಳು ಹಾಗೂ ಸಮಸ್ಯೆಗಳು ಅವರಿಗೆ ಮುಖ್ಯವಾಗಿಲ್ಲ ಎಂಬುದನ್ನು ನೋಡಿದರೆ ಬಹಳ ಬೇಸರವಾಗುತ್ತಿದೆ. ಶಾಸಕರೊಂದಿಗೆ ಮಾತುಕತೆ ನಡೆಸಲು ರಾಜ್ಯಜ ವಿವಿಧೆಡೆಗಳಿಂದ ಮಕ್ಕಳು ಆಗಮಿಸಿದ್ದರು. 300 ಶಾಸಕರ ಪೈಕಿ ಕೇವಲ 4 ಶಾಸಕರು ಮಾತ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದರಿಂದ ಮಕ್ಕಳು ಬೇಸರಗೊಂಡು ವಾಪಸ್ಸಾಗುವಂತಾಯಿತು ಎಂದು ಶಾಲಾ ಬಾಲಕನೊಬ್ಬ ಹೇಳಿದ್ದಾನೆ.
ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುಎನ್‌ಐಸಿಇಎಫ್) ಸಹಯೋಗದೊಂದಿಗೆ ಕರ್ನಾಟಕ ಮಕ್ಕಳ ಹಕ್ಕುಗಳ ವೀಕ್ಷಣಾಲಯ ವಿಧಾನಸೌಧದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ರಾಜ್ಯ ಎಲ್ಲಾ ಜನಪ್ರತಿನಿಧಿಗಳೂ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮಕ್ಕೆ ಹಾಜರಾಗುವ ಜನಪ್ರತಿನಿಧಿಗಳು ಮಕ್ಕಳೊಂದಿಗೆ ಮಾತುಕತೆ ನಡೆಸಿ ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಬೇಕಿತ್ತು. ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಶಾಸಕರು ಕಾರ್ಯಕ್ರಮಕ್ಕೆ ಹಾಜರಾಗದ ಕಾರಣ ಕಾರ್ಯಕ್ರಮ ಆರಂಭ ಕೂಡ ತಡವಾಯಿತು. ಪ್ರಶ್ನಾವಳಿ ಸಮಯ ಕೂಡ ವ್ಯರ್ಥವಾಗುವಂತಾಯಿತು.
ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮತ್ತು ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಅವರು ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಿದ್ದರು. ಇತರೆ ಸದಸ್ಯರಿಗಾಗಿ ಗಂಟೆಗಳ ಕಾಲ ಕಾದು ಕುಳಿತಿದ್ದರು. ಗಂಟೆಗಟ್ಟಲೆ ಕಾದರೂ ಜನಪ್ರತಿನಿಧಿಗಳು ಹಾಜರಾಗದ ಕಾರಣ ಕಾರ್ಯಕ್ರಮವನ್ನು 11.30ಕ್ಕೆ ಆರಂಭಿಸಲಾಗಿದೆ.
ಜನಪ್ರತಿನಿಧಿಗಳ ನೀರಸ ಪ್ರತಿಕ್ರಿಯೆಗೆ ಮಕ್ಕಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಉಡುಪಿ ಯಿಲ್ಲೆ ಸೌಜನ್ಯ ಶೆಟ್ಟಿ ಎಂಬ ಬಾಲಕಿ ಮಾತನಾಡಿ, ನಮ್ಮ ಜಿಲ್ಲೆ ಕುರಿತಂತೆ ಸಚಿವರಿಗೆ ನಾನು ಕೆಲ ಪ್ರಶ್ನೆಗಳನ್ನು ಕೇಳಬೇಕೆಂದು ಬಯಸಿದ್ದೆ. ಆದರೆ, ಇಲ್ಲಿ ಬಂದಾಗ ಸಚಿವರಾರು ಬಂದಿಲ್ಲ ಎಂಬುದು ತಿಳಿಯಿತು. ಬಹಳ ಬೇಸರವಾಯಿತು ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿ ಸುಭಾಷ್ ಮಾತನಾಡಿ, ಶಾಸಕರನ್ನು ಭೇಟಿಯಾಗಲೆಂದು ಬಂದಿದ್ದೆ. ಈ ವೇಳೆ ನಮ್ಮ ಜಿಲ್ಲೆಯ ಸಾಕಷ್ಟು ವಿಚಾರಗಳು ಹಾಗೂ ಸಮಸ್ಯೆಗಳನ್ನು ಹೇಳಬೇಕಿಂದಿದ್ದೆ. ಆದರೆ, ನಮ್ಮ ಸಮಸ್ಯೆಗಳು ಅವರಿಗೆ ಮುಖ್ಯವಾಗಿಲ್ಲ ಎಂಬುದನ್ನು ನೋಡಿದರೆ ಬೇಸರವಾಗುತ್ತಿದೆ ಎಂದು ತಿಳಿಸಿದ್ದಾನೆ.
ಅಧಿವೇಶನ ನಡೆಯುವ ಎಲ್ಲಾ ಸ್ಥಳಗಳಿಗೆ ನಾವು ಭೇಟಿ ನೀಡಿದ್ದೆವು.. ಶಾಸಕರು ಹಾಗೂ ಸಂಸದರು ಪ್ರತೀಯೊಬ್ಬರನ್ನೂ ಆಹ್ವಾನಿಸಲು ಬೆಳಗಾವಿಗೂ ಕೂಡ ನೀಡಿದ್ದೆವು. ಕೆಲ ಜಿಲ್ಲೆಗಳ ಅಧಿಕಾರಿಗಳು, ಪೋಷಕರು, ಮಕ್ಕಳು ಹಾಗೂ ಶಿಕ್ಷಕರು ಶಾಸಕರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದರು. ಆಹ್ವಾನ ನೀಡುವ ವೇಳೆ ಬರುತ್ತೇವೆಂದು ತಿಳಿಸಿದ್ದರು. ಆದರೂ ಕಾರ್ಯಕ್ರಮಕ್ಕೆ ಬಂದಿಲ್ಲ. ವಿಧಾನಪರಿಷತ್ ಸದಸ್ಯ ಇವಾನ್ ಡಿಸೋಜಾ ಹಾಗೂ ರಮೇಶ್ ಬಾಬು ಅವರು ಕಾರ್ಯಕ್ರಮ ಅಂತ್ಯಗೊಳ್ಳುವ ವೇಳೆ ಹಾಜರಾಗಿದ್ದರು. ಕಾರ್ಣಿಕ್ ಅವರು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರ ನೀಡಿದ್ದರು ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.